ರಾಮನಗರ : ಪ್ರಾಧಿಕಾರದ ನಿವೇಶನಗಳ ಕಾನೂನು ತೊಡಕುಗಳನ್ನು ಸಚಿವ ಸಂಪುಟದ ನಿರ್ಣಯದ ಮೂಲಕ ಸರ್ಕಾರ ಬಗೆಹರಿಸಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ತಿಳಿಸಿದರು.
ರಾಮನಗರದ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಬುಧವಾರ ನಿವೇಶನ ಪಡೆದ ಭೂ-ಮಾಲೀಕರಿಂದ ನಿವೇಶನ ಅಭಿವೃದ್ಧಿಗಾಗಿ ನೀಡಿದ ಡಿಡಿ ಸ್ವೀಕರಿಸಿ ಮಾತನಾಡಿ, ಅಭಿವೃದ್ಧಿ ಶುಲ್ಕ ಪಾವತಿಸಿ ಅಧಿಕೃತ ಖಾತಾ ದಾಖಲೆಗಳನ್ನು ಪಡೆದುಕೊಳ್ಳಲು ನಿವೇಶನ ಮಾಲೀಕರು ಉತ್ಸುಕರಾಗಿದ್ದಾರೆ. ಈಗಾಗಲೇ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿವೇಶನದಾರರು ಅಭಿವೃದ್ಧಿ ಶುಲ್ಕ ಪಾವತಿಸಲು ಸಮ್ಮತಿ ಸೂಚಿಸಿದ್ದರು. ಅದರಂತೆ ನಿವೇಶನದಾರರು ಡಿಡಿ ಮೂಲಕ ಶುಲ್ಕ ಪಾವತಿಸುತ್ತಿದ್ದಾರೆ ಎಂದರು.
ಪ್ರತಿನಿತ್ಯ ಹತ್ತಾರು ನಿವೇಶನ ಮಾಲೀಕರು ಕಚೇರಿಗೆ ಬಂದು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಒಂದು ಅಡಿಗೆ 200 ರೂ.ನಂತೆ ಅಭಿವೃದ್ಧಿ ಶುಲ್ಕ ಪಾವತಿಸಿಕೊಂಡು ಬಡಾವಣೆ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಹಾಗೂ ಮಾಲೀಕರಿಗೆ ಶುದ್ಧ ಕ್ರಯಪತ್ರ ಹಾಗೂ ಇ-ಖಾತೆ ವಿತರಿಸಲು ಸರ್ಕಾರ ಸೂಚಿಸಿದೆ.
ಈವರೆಗೆ 25ಕ್ಕೂ ಅಧಿಕ ಮಂದಿ ಡಿಡಿ ಮೂಲಕ ಅಭಿವೃದ್ಧಿ ಶುಲ್ಕ ಪಾವತಿಸಿದ್ದಾರೆ. ಇವರಿಗೆ 10 ದಿನದೊಳಗೆ ಖಾತೆ ನೀಡಲು ಅಗತ್ಯ ಪ್ರಕ್ರಿಯಗಳನ್ನು ಕೈಗೊಂಡಿದೆ. ಬಡಾವಣೆ ಅಭಿವೃದ್ಧಿಗೆ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿತ್ತು. ಆದರೆ, ಡಿಪಿಆರ್ ಸಿದ್ಧತೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಶೀಘ್ರವಾಗಿ ಟೆಂಡರ್ ಪ್ರಕ್ರಿಯ ಮುಕ್ತಾಯಗೊಳಿಸಿ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು. ಈಗಾಗಗಲೇ ಆಯಾ ಇಒಗಳ ಜತೆ ಸಭೆ ನಡೆಸಲಾಗಿದ್ದು, ಯಾವುದೇ ಅಡೆತಡೆ ಇಲ್ಲದೆ ಖಾತೆಗಳು ಲಭ್ಯವಾಗಲಿದೆ. ನಿವೇಶನದಾರರು ಶೀಘ್ರ ಶುಲ್ಕ ಪಾವತಿಸಿ ಎಂದು ಮನವಿ ಮಾಡಿದರು.