ಮೈಸೂರು: ಜಗತ್ತನ್ನೇ ಬದಲಿಸುಷ್ಟು ಶಕ್ತಿ ಇರುವ ಕಾವ್ಯದ ಮೂಲಕ ರಾಷ್ಟ್ರೀಯತೆ, ಫ್ಯಾಸಿಸಂ ಜತೆಗೆ ಮಹಿಳಾ ಶೋಷಣೆಯ ಬಗೆಗೂ ಗಮನಹರಿಸಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕಿ ಡಾ.ಕವಿತಾ ರೈ ಅಭಿಪ್ರಾಯಪಟ್ಟರು.
ಸನ್ವಿತಿ ಪ್ರಕಾಶನದಿಂದ ನಗರದ ಇಂಜಿನಿಯರುಗಳ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ಸನ್ವಿತಿ ಕನ್ನಡ ಕಾವ್ಯ ಸಂಭ್ರಮ, ರಾಜ್ಯಮಟ್ಟದ ಕಾವ್ಯೋತ್ಸವ, ಲೇಖನ ವಿಹಾರ ಪುಸ್ತಕ ಲೋಕಾರ್ಪಣೆ, ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾಹಿತ್ಯ, ಕಾವ್ಯದ ಮೂಲಕ ಅನೇಕ ಬದಲಾವಣೆಯನ್ನು ತಂದುಕಟ್ಟಿದೆ. ಕಾವ್ಯಕ್ಕೆ ಅಂತಹ ಶಕ್ತಿ ಇದೆ ಎನ್ನುವುದನ್ನು ಕನ್ನಡದ ನೆಲ ತೋರಿಸಿಕೊಟ್ಟಿದೆ. ಹನ್ನೇರಡನೇ ಶತಮಾನದಲ್ಲಿ ಬಸವಣ್ಣ, ಅಕ್ಕಮಹಾದೇವಿ ಮತ್ತಿತರ ನೇತೃತ್ವದಲ್ಲಿ ನಡೆದ ವಚನ ಚಳವಳಿಯೇ ಇದಕ್ಕೆ ಸಾಕ್ಷಿ ಎಂದರು. ಪುರುಷ ಮತ್ತು ಮಹಿಳೆಯರ ನಡುವೆ ಸಮಾನತೆ ಎಂಬುದು ಅವಕಾಶಗಳ ನೆಲೆಯಲ್ಲಿ ಇರಬೇಕು. ಕವಿಗಳಲ್ಲಿ ಸೂಕ್ಷ್ಮತೆ ಇಲ್ಲದಿದ್ದರೇ ಸುಮ್ಮನೆ ಆಲಾಪ ಆಗುತ್ತದೆ ಎಂದು ವಿಶ್ಲೇಷಿಸಿದರು.
ಮೊಹಮ್ಮದ್ ಅಜರುದ್ದೀನ್ ಅವರ ಲೇಖನ ವಿಹಾರ ಕೃತಿ ಬಿಡುಗಡೆ ಮಾಡಿದ ಸಾಹಿತಿ ಟಿ. ಸತೀಶ್ ಜವರೇಗೌಡ ಮಾತನಾಡಿ, ಕನ್ನಡ ಸಾಹಿತ್ಯ ಸಮೃದ್ಧಿಯಾಗಬೇಕಾದರೆ ಬೇರೆ ಬೇರೆ ಸಂವೇದನೆಗಳು ಸೇರ್ಪಡೆಯಾಗಬೇಕು. ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಡುವ ಲೇಖನಗಳು ಈ ಕೃತಿಯಲ್ಲಿವೆ. ಕವಿಗಳು ತಾವು ಬರೆದಿದ್ದನ್ನು ಓದಿ, ತಿದ್ದಿ ಮತ್ತೆ ಮತ್ತೆ ಬರೆದರೆ ಉತ್ತಮ ಕಾವ್ಯ ರಚಿಸಬಹುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೆ.ಆರ್. ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಮೈಸೂರು ಕೃಷ್ಣಮೂರ್ತಿ ಮಾತನಾಡಿ, ಎಲ್ಲಕ್ಕಿಂತ ಮಾನವೀಯತೆ ಮುಖ್ಯ ಎಂಬುದನ್ನು ಅರಿಯಬೇಕು ಎಂದರು.
ಇದೇ ಸಂದರ್ಭದಲ್ಲಿ ಟಿ. ಸತೀಶ್ ಜವರೇಗೌಡ- ಸಾಹಿತ್ಯ ಕ್ಷೇತ್ರ, ಪ್ರೊ.ಎನ್. ನಾಗೇಂದ್ರ, ಡಾ.ಸಿ.ಪಿ. ಲಾವಣ್ಯ- ಶಿಕ್ಷಣ ಕ್ಷೇತ್ರ, ಲಕ್ಷ್ಮೀಶ ಶರ್ಮಾ, ಎಂ.ಎಂ. ನಿಖಿಲೇಶ್- ಸಮಾಜ ಸೇವೆ, ಎ.ಸಿ. ಮಂಜುನಾಥ್- ಸಂಘಟನೆ ಅವರಿಗೆ ಸನ್ವಿತಿ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಪ್ರದಾನ ಮಾಡಿದರು.
ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕಂಚಿನಕೆರೆ ಗೋವಿಂದೇಗೌಡ ಆಶಯ ಭಾಷಣ ಮಾಡಿದರು. ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಜಿ.ಎಚ್. ಮಹದೇವಸ್ವಾಮಿ, ಬೆಂಗಳೂರಿನ ಸಾಹಿತಿ ಡಿ. ಪದ್ಮನಾಭ, ಎಂಎಂಕೆ ಮತ್ತು ಎಸ್‌ಡಿಎಂ ನಿರ್ವಹಣಾ ವಿಭಾಗದ ಅಧ್ಯಾಪಕ ಶಿವಬೀರಪ್ಪ, ಶೇಷಾದ್ರಿಪುರಂ ಪದವಿ ಕಾಲೇಜಿನ ಅಧ್ಯಾಪಕ ಸಿದ್ದಪ್ಪ ಕಾರ್ಯ, ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಉಪನ್ಯಾಸಕಿ ಎಚ್.ಕೆ. ದೀಪಾ, ಸೇಪಿಯಂಟ್ ಕಾಲೇಜಿನ ಅಧ್ಯಾಪಕ ಅಂಬಳೆ ಮಹದೇವಸ್ವಾಮಿ, ಸನ್ವಿತಿ ಪ್ರಕಾಶನದ ಸಂಸ್ಥಾಪಕ ಅಧ್ಯಕ್ಷ ಬಸಪ್ಪ ಸಿ. ಸಾಲುಂಡಿ, ಸಂಚಾಲಕ ಕೀರ್ತಿಕುಮಾರ್ ಇದ್ದರು.