ಜಿಲ್ಲೆ

ಪಿಇಟಿಯಲ್ಲಿ ಕೆವಿಎಸ್ ಕಪ್ ಕಲರವ: ಕ್ರಿಕೆಟ್ ಟೂರ್ನಿಗೆ ಚಿತ್ರನಟರು, ಮಹಿಳಾ ಆಟಗಾರರ ಮೆರಗು

ಮಂಡ್ಯ: ಪಿಇಟಿ ಸಂಸ್ಥೆಯ ಸಂಸ್ಥಾಪಕರೂ ಆದ ನಿತ್ಯಸಚಿವ ಕೆ.ವಿ.ಶಂಕರಗೌಡ ಸ್ಮರಣಾರ್ಥ ಆಯೋಜಿಸಿರುವ ಮೂರು ದಿನದ ಟಿ-20 ಕ್ರಿಕೆಟ್ ಪ್ರೀಮಿಯರ್ ಲೀಗ್ ‘ಕೆವಿಎಸ್ ಕಪ್’ ಟೂರ್ನಿಗೆ ಮಂಗಳವಾರ ಚಾಲನೆ ನೀಡಲಾಯಿತು. ಅಂತೆಯೇ ಕನ್ನಡ ಚಿತ್ರರಂಗದ ನಟರು ಹಾಗೂ ರಾಜ್ಯ ಮಹಿಳಾ ಕ್ರಿಕೆಟ್ ತಂಡ ಆಟಗಾರರು ಭಾಗವಹಿಸುವ ಮೂಲಕ ಪಂದ್ಯಾವಳಿಯ ಮೆರಗು ಹೆಚ್ಚಿಸಿದ್ದಾರೆ.

ಟೂರ್ನಿಗೆಂದು ನಾಲ್ಕು ತಂಡ ರಚನೆ ಮಾಡಲಾಗಿದೆ. ಚಿತ್ರನಟರಾದ ಲೂಸ್‌ಮಾದ ಖ್ಯಾತಿಯ ಯೋಗೇಶ್, ಕೆಜಿಎ್ ಗರುಡ ಖ್ಯಾತಿಯ ರಾಮ್, ರವಿಶಂಕರ್‌ಗೌಡ, ಹರ್ಷ ಸಿ.ಎಂ.ಗೌಡ, ವಿವಾನ್, ಸಾಗರ್ ಬಿಳೀಗೌಡ, ಅಭಿಲಾಷ್ ದಳಪತಿ, ರಂಜಿತ್‌ಕುಮಾರ್, ದಿಲೀಪ್ ಕೆಂಪೇಗೌಡ, ದರ್ಶಿತ್, ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಗಾಯಕರಾದ ವ್ಯಾಸರಾಜ್, ಕರಿಬಸವ ತಡಕಲ್ ಜತೆಗೆ ಪ್ರಾದೇಶಿಕ ಕ್ರಿಕೆಟ್ ಆಟಗಾರರು ಭಾಗವಹಿಸಿದ್ದಾರೆ. ಇದಲ್ಲದೆ ರಾಜ್ಯ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿರುವ ನೇಸರ ಸಪ್ತಗಿರೀಶ್, ತಾನ್ವಿ, ಲಿಯಾಂಕ ಶೆಟ್ಟಿ, ಜ್ಯೋಸ್ನಾ, ಹರ್ಷಿತಾ, ಕಾವ್ಯಾ, ಹಂಸಾ ಟೂರ್ನಿಯಲ್ಲಿ ವಿವಿಧ ತಂಡದ ಪರ ಆಡುತ್ತಿದ್ದಾರೆ.

ಮಂಗಳವಾರ ಬೆಳಗ್ಗೆ ಟೂರ್ನಿಗೆ ಚಾಲನೆ ನೀಡಿದ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಮಾತನಾಡಿ, ರೈತ ಸಹಕಾರದಿಂದ ಕಟ್ಟಿರುವ ಸಂಸ್ಥೆ ನಮ್ಮದು. ಜತೆಗೆ ನಾಟಕಗಳ ಪ್ರದರ್ಶನ ನೀಡಿ ಬಂದಂತಹ ಹಣದಲ್ಲಿ ಸಂಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಕಲಾವಿದರು ನಮ್ಮ ಸಂಸ್ಥೆ ಆಯೋಜಿಸಿರುವ ಟೂರ್ನಿಯಲ್ಲಿ ಪಾಲ್ಗೊಂಡಿರುವುದು ಖುಷಿಯ ವಿಚಾರ. ನಾವು ಆರು ಕನ್ನಡ ಚಿತ್ರವನ್ನು ನಿರ್ಮಾಣ ಮಾಡಿದ್ದೇವು. ಪಿಇಟಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸುಮಾರು 14 ವರ್ಷದ ಹಿಂದೆ ಕರ್ನಾಟಕ ಮತ್ತು ಮಹಾರಾಷ್ಟ್ರದ ತಂಡ ನಡುವೆ ಒಂದು ರಣಜಿ ಪಂದ್ಯ ನಡೆದಿತ್ತು ಎಂದರು.

ಪಿಇಟಿ ಸಂಸ್ಥೆ ಉಪಾಧ್ಯಕ್ಷ ಬಸವಪ್ಪ, ಜಂಟಿ ಕಾರ್ಯದರ್ಶಿ ಕೆ.ಆರ್.ದಯಾನಂದ್, ಪಂದ್ಯಾವಳಿಯ ನಿರ್ವಾಹಕ ನಂದಕಿಶೋರ್, ಪಿಇಟಿ ಸಂಸ್ಥೆಯ ದೈಹಿಕ ಶಿಕ್ಷಣ ಸಹಾಯಕ ನಿರ್ದೇಶಕ ಡಾ.ಅನಂತಪದ್ಮನಾಭ ಪ್ರಭು, ಮಾಧ್ಯಮ ಮತ್ತು ಪ್ರಚಾರ ಅಧಿಕಾರಿ ಡಾ.ಕೋದಂಡಪಾಣಿ ಇತರರಿದ್ದರು.

ಪಿಇಟಿ ಬ್ಲ್ಯೂ ತಂಡ ಶುಭಾರಂಭ

ಟೂರ್ನಿಗಾಗಿ ನಾಲ್ಕು ತಂಡ ರಚನೆ ಮಾಡಲಾಗಿದೆ. ಕೆಜಿಎಫ್ ಗರುಡ ಖ್ಯಾತಿಯ ರಾಮ್ ನೇತೃತ್ವದ ಪಿಇಟಿ ಯಲ್ಲೋ ವಾರಿಯರ್ಸ್, ರವಿಶಂಕರ್‌ಗೌಡ ನಾಯಕತ್ವದ ಪಿಇಟಿ ಬ್ಲ್ಯೂ ಸೋಲ್ಜರ್ಸ್, ಲೂಸ್‌ಮಾದ ಖ್ಯಾತಿಯ ಯೋಗೇಶ್ ಪಿಇಟಿ ರೆಡ್ ಚಾಲೆಂಜರ್ಸ್ ಹಾಗೂ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಪಿಇಟಿ ಪಿಂಕ್ ಪ್ಯಾಂಥರ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಮೊದಲ ಪಂದ್ಯದಲ್ಲಿ ಪಿಇಟಿ ಬ್ಲ್ಯೂ ಸೋಲ್ಜರ್ಸ್ ತಂಡ ಪಿಇಟಿ ಯಲ್ಲೋ ವಾರಿಯರ್ಸ್ ತಂಡವನ್ನು 71 ರನ್‌ಗಳ ಅಂತರದಲ್ಲಿ ಸೋಲಿಸಿತು. ಮೊದಲ ಬ್ಯಾಟ್ ಮಾಡಿ ಬ್ಲೂ ಸೋಲ್ಜರ್ಸ್ ತಂಡ 20 ಓವರ್‌ಗಳನ್ನು ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 148 ರನ್ ಗಳಿಸಿತು. ಪ್ರತಿಯಾಗಿ ಎರಡನೇ ಇನ್ಸಿಂಗ್ಸ್‌ನಲ್ಲಿ ಬ್ಯಾಟ್ ಮಾಡಿದ ಯಲ್ಲೋ ವಾರಿಯರ್ಸ್ ತಂಡ 14.2 ಓವರ್‌ಗಳನ್ನು 77 ರನ್‌ಗಳಿಗೆ ಆಲೌಟ್ ಆಯಿತು.