ಜಿಲ್ಲೆ

ನಿತ್ಯಸಚಿವ ಕೆ.ವಿ.ಶಂಕರಗೌಡ ಧೀಮಂತ ನಾಯಕರು: ಬದುಕು ಬೆಳಕು ಸೇವಾ ಸಮಿತಿ ಅಧ್ಯಕ್ಷ ಅರವಿಂದ್ ಬಣ್ಣನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಜಿಲ್ಲೆಯ ಶೈಕ್ಷಣಿಕ, ಸಹಕಾರ ಕ್ಷೇತ್ರದ ಅಭಿವೃದ್ದಿಗೆ ಮುನ್ನುಡಿ ಬರೆದ ನಿತ್ಯಸಚಿವ ಕೆ.ವಿ.ಶಂಕರಗೌಡರನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಬದುಕು ಬೆಳಕು ಸೇವಾ ಸಮಿತಿ ಅಧ್ಯಕ್ಷ ಅರವಿಂದ್ ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು(ಕಲ್ಲುಕಟ್ಟಡ) ಸಭಾಂಗಣದಲ್ಲಿ ಬದುಕು ಬೆಳಕು ಸೇವಾ ಸಮಿತಿ, ಮಂಡ್ಯ ಅಮೃತ ಲಯನ್ಸ್ ಸಂಸ್ಥೆ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಕೆ.ವಿ.ಶಂಕರಗೌಡ ಅವರ 108ನೇ ಜನ್ಮದಿನ ಅಂಗವಾಗಿ ಆಯೋಜಿಸಿದ್ದ ಕೆ.ವಿ.ಶಂಕರಗೌಡ ಕುರಿತ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಯಾವುದೇ ಫಲಾಪೇಕ್ಷೆ ಇಲ್ಲದೆ ಕೊಡಿಗೆ ನೀಡಿದ ಕೆವಿಎಸ್ ಅವರಂತಹ ಧೀಮಂತ ನಾಯಕರನ್ನು ಸದಾ ಸ್ಮರಿಸೋಣ. ಇಂದಿನ ಕಲುಷಿತ ರಾಜಕಾರಣದಲ್ಲಿ ಎಲ್ಲವನ್ನೂ ಜನರು ನೋಡಿರುತ್ತಾರೆ. ಕೆ.ವಿ.ಶಂಕರಗೌಡ ಅವರ ರಾಜಕೀಯ ಜೀವನದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ನಡೆದಿದ್ದವು. ಪರಿಶುದ್ಧ ರಾಜಕಾರಣಕ್ಕೆ ಕೆವಿಎಸ್ ಉದಾರಣೆಯಾಗಿ ನಿಲ್ಲುತ್ತಾರೆ ಎಂದು ಸ್ಮರಿಸಿದರು.

ಕೆ.ವಿ.ಶಂಕರಗೌಡ ಪ್ರಶಸ್ತಿ ಸ್ವೀಕರಿಸಿದ ಮೈಸೂರು ಜಯದೇವ ಹೃದ್ರೋಗ ಆಸ್ಪತ್ರೆ ಅಧೀಕ್ಷಕ ಡಾ.ಕೆ.ಎಸ್.ಸದಾನಂದ ಮಾತನಾಡಿ, ಶೈಕ್ಷಣಿಕ ಜೀವನದಲ್ಲಿ ವಿದ್ಯಾರ್ಥಿಗಳಿಗೆ ಇಂತಹ ಹುದ್ದೆ ಪಡೆದುಕೊಳ್ಳಬೇಕೆನ್ನುವ ಗುರಿ ಇರಬೇಕು. ಅದನ್ನು ತಲುಪಲು ಶ್ರಮ ಪಡಬೇಕು. ಇಂದಿನ ದಿನಗಳಲ್ಲಿ ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡಬೇಕಿದೆ. ಚೆನ್ನಾಗಿ ಓದುತ್ತೀರಿ, ಹೆಚ್ಚಾಗಿ ಸಂಪಾದನೆ ಮಾಡುತ್ತೀರಿ. ಆದರೆ ಆರೋಗ್ಯ ಚೆನ್ನಾಗಿಲ್ಲವೆಂದರೆ ಏನು ಪ್ರಯೋಜನ. ಅತಿ ಸಣ್ಣ ವಯಸ್ಸಿನಲ್ಲೇ ದೊಡ್ಡ ಕಾಯಿಲೆಗಳು ಬರುತ್ತಿವೆ. 20 ರಿಂದ 30 ವಯಸ್ಸಿನಲ್ಲಿಯೇ ಹೃದ್ರೋಗ ಸಮಸ್ಯೆ ಕಾಣಿಸಿಕೊಳ್ಳುತ್ತಿವೆ. ಆದ್ದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ತುಂಬಾ ಮುಖ್ಯ ಎಂದರು.

ಪ್ರಾಂಶುಪಾಲ ಎಚ್.ಪಿ.ತಮ್ಮೇಗೌಡ, ಲಯನ್ಸ್ ಸಂಸ್ಥೆ ಆಧ್ಯಕ್ಷ ಎಂ.ಲೋಕೇಶ್, ಉದ್ಯಮಿ ಎಂ.ವಿನಯ್‌ಕುಮಾರ್, ಕಸಾಪ ನಗರ ಘಟಕ ಅಧ್ಯಕ್ಷೆ ಸುಜಾತಾ ಕೃಷ್ಣ, ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು, ಸಹಾಯಕ ಪ್ರಾಧ್ಯಾಪಕ ಡಾ. ಎಸ್.ಶಿವರಾಮು ಇತರರಿದ್ದರು.