ಮಂಡ್ಯ: ಅವಕಾಶಗಳು ಎಲ್ಲರಿಗೂ ಸಿಗುವುದಿಲ್ಲ. ಆದರೆ ಸಿಗುವ ಅವಕಾಶವನ್ನು ಉಪಯೋಗಿಸಿಕೊಂಡು ಮೇಲೆಕ್ಕೇರುವ ಪ್ರಯತ್ನ ಮಾಡಬೇಕು. ಮಾತ್ರವಲ್ಲದೆ ಅಶಕ್ತರು, ಧಮನಿತರಿಗೆ ಸೇವೆ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಹೇಳಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಿತ್ಯಸಚಿವ ಕೆ.ವಿ.ಶಂಕರಗೌಡ 108ನೇ ಜನ್ಮ ದಿನಾಚರಣೆ ಅಂಗವಾಗಿ ಕೃಷಿಕ ಲಯನ್ಸ್ ಸಂಸ್ಥೆ, ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಕೊಪ್ಪ ವತಿಯಿಂದ ಆಯೋಜಿಸಿದ್ದ 2023ನೇ ಸಾಲಿನ ಕೆ.ವಿ.ಶಂಕರಗೌಡ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸೇವೆಯಲ್ಲಿ ಸಣ್ಣದು, ದೊಡ್ಡದು ಎನ್ನುವುದಿಲ್ಲ. ಕಾಂಜಲ ಮನಸ್ಸಿನಿಂದ ಶಕ್ತಿ ಇರುವಷ್ಟು ಇನ್ನೊಬ್ಬರಿಗೆ ಸೇವೆ ಮಾಡುವುದೇ ನಿಜವಾಗಿರುತ್ತದೆ ಎಂದು ಹೇಳಿದರು.
ಪ್ರಸ್ತುತ ಪ್ರಕೃತಿಯನ್ನು ಸಂಪೂರ್ಣವಾಗಿ ಕಾಯ್ದುಕೊಳ್ಳುವುದನ್ನು ಬಿಟ್ಟು ನಾಶ ಮಾಡುವಂತಹ ಸಂಸ್ಕೃತಿ ಸರಿಯಲ್ಲ. ಸೃಷ್ಠಿ ಮಾಡಲು ಸಾಧ್ಯವಿಲ್ಲವೆಂದಾದರೆ, ನಾಶ ಮಾಡುವ ಹಕ್ಕು ಸಹ ನಮಗಿರುವುದಿಲ್ಲ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಅದು ಬಿಟ್ಟು ನಾಶ ಮಾಡುವಂತಹ ಪ್ರವೃತ್ತಿಗೆ ನಾವು ಇಳಿದುಬಿಟ್ಟಿದ್ದೇವೆ. ಪ್ರಾಮಾಣಿಕತೆ ಕಡಿಮೆಯಾಗಿದೆ. ಹಿಂದೆಲ್ಲ ಸೂರ್ಯ, ಚಂದ್ರರನ್ನೇ ಸಾಕ್ಷಿಯನ್ನಾಗಿಟ್ಟುಕೊಂಡು ಹಣಕಾಸಿನ ವ್ಯವಹಾರ ಮಾಡುತ್ತಿದ್ದರು. ಮಾತಿಗೆ ಅಷ್ಟು ಪ್ರಾಮುಖ್ಯತೆ ಇತ್ತು. ಆದರೆ ಇಂದು ದೇವರ ಮೇಲೆ ಪ್ರಮಾಣ ಮಾಡಿ ಸುಳ್ಳು ನುಡಿಯುವಂತಹ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ವಿಷಾದಿಸಿದರು.
ಕೆ.ವಿ.ಶಂಕಗೌಡರ ಹೆಸರನ್ನು ಬಾನೆತ್ತರದಲ್ಲಿ ನೋಡಬೇಕು. ಅವರೆಂದೂ ಜಾತಿವಾದಿಯಾಗಿರಲಿಲ್ಲ. ಶ್ರೀಮಂತರನ್ನು ಓಲೈಸುವ ಕೆಲಸ ಮಾಡುತ್ತಿರಲಿಲ್ಲ. ಪ್ರತಿಭೆ, ಬಡತನಕ್ಕೆ ಮನ್ನಣೆ ನೀಡುತ್ತಿದ್ದು. ಪ್ರತಿಭಾವಂತ ಹುಡುಗ ಬಡತನದಲ್ಲಿದ್ದರೂ, ಆತನ ವಿದ್ವತ್ತನ್ನು ಕಂಡು ಬೆರಗಾಗಿ ಯಾರದ್ದೋ ಮೂಲಕ ಸಹಾಯ ಮಾಡುವಂತಹ ಮನೋಭಾವವನ್ನು ಬೆಳೆಸಿಕೊಂಡಿದ್ದರು. ಅದರಿಂದಾಗಿ ಎಷ್ಟೋ ಜನ ಅವರಿಂದ ಸಹಾಯ ಪಡೆದು ಉನ್ನತ ಸ್ಥಾನಮಾನವನ್ನು ಅನುಭವಿಸಿದ್ದಾರೆ ಎಂದು ಉದಾಹರಣೆ ಸಮೇತ ವಿವರಿಸಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ.ಎಸ್.ಶಿವರಾಮು ಅವರಿಗೆ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು. ಲಯನ್ಸ್ ಸಂಸ್ಥೆಯ ಕೆ.ಪಿ.ವೀರಪ್ಪ, ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು, ಮೋಹನ್‌ಕುಮಾರ್, ಡಾ.ಎಂ.ಕೆಂಪಮ್ಮ, ಲೋಕೇಶ್ ಚಂದಗಾಲು, ರಕ್ಷಿತ್‌ರಾಜ್, ರಮೇಶ್, ಪ್ರೊ.ಪ್ರತಿಭಾಂಜಲಿ ಡೇವಿಡ್ ಇತರರಿದ್ದರು.