ಕುವೆಂಪು ವಿವಿಯಲ್ಲಿ ಸಚಿವ ಮಧು ಬಂಗಾರಪ್ಪ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಪ್ರೊ. ಎಸ್.ಎಂ.ಗೋಪಿನಾಥ್ ಇತರರಿದ್ದರು.  
ಜಿಲ್ಲೆ

ಕುವೆಂಪು ವಿವಿ ಸಮಸ್ಯೆ ಬಗೆಹರಿಸುವೆ: ಮಧು ಭರವಸೆ

ಅರವಿಂದ ಅಕ್ಲಾಪುರ

ಶಿವಮೊಗ್ಗ:ಕುವೆಂಪು ವಿಶ್ವವಿದ್ಯಾಲದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಮಸ್ಯೆ, ಅಂಕಪಟ್ಟಿ ಪಡೆಯುವಲ್ಲಿ ಆಗುತ್ತಿರುವ ವಿಳಂಬ, ಕೇಂದ್ರೀಕೃತ ಯುಯುಸಿಎಂಎಸ್ ಪೋರ್ಟಲ್‌ನಿಂದ ಆಗುತ್ತಿರುವ ತೊಡಕುಗಳೂ ಸೇರಿ ಪ್ರಸ್ತುತ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.

ಕುವೆಂಪು ವಿವಿಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ವಿವಿ ಹಣಕಾಸು ವ್ಯವಸ್ಥೆ ಸಂಕಷ್ಟದಲ್ಲಿದ್ದು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.
ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, ವಿವಿ ಸರ್ಕಾರದ ಅನುದಾನದ ಮೇಲೆ ಸಂಪೂರ್ಣ ಅವಲಂಬಿತವಾಗದೆ ಸಿಎಸ್‌ಆರ್ ನಿಧಿ ಹಾಗೂ ಇತರ ಚಟುವಟಿಕೆಗಳ ಮೂಲಕ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಪ್ರಥಮದರ್ಜೆ ಕಾಲೇಜುಗಳ ಅಫಿಲಿಯೇಷನ್‌ಗಾಗಿ ಸರ್ಕಾರಕ್ಕೆ 35 ಪ್ರಸ್ತಾವನೆ ಕಳಿಸಿದ್ದೆವು. ಅಫಿಲಿಯೇಷನ್ ದೊರಕದೆ ಕಾಲೇಜು ಆರಂಭಿಸಲು ಸಾಧ್ಯವಿಲ್ಲ. 17 ಸರ್ಕಾರಿ ಕಾಲೇಜುಗಳಿಗೆ ಅನುಮೋದನೆ ಆಗಿದೆ. 18 ಕಾಲೇಜು ಬಾಕಿ ಇರುವ ಕಾರಣ ದಾಖಲಾತಿ ಸಾಧ್ಯವಾಗುತ್ತಿಲ್ಲ ಎಂದರು.
ಫಲಿತಾಂಶ ತ್ವರಿತವಾಗಿ ನೀಡಲು ಸ್ವಲ್ಪ ತೊಡಕು ಇದೆ. ಯುಯುಸಿಎಂಎಸ್‌ನಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡುವುದೂ ಕಷ್ಟವಾಗುತ್ತಿದೆ. ಮೂರು ವರ್ಷದಿಂದ ಸ್ನಾತಕೋತ್ತರ ಪದವಿ ಅಂಕಪಟ್ಟಿ ನೀಡಲಾಗಿಲ್ಲ. ವಿಕೇಂದ್ರೀಕರಣ ವ್ಯವಸ್ಥೆ ಜಾರಿಯಾದರೆ ಅನುಕೂಲವಾಗುತ್ತದೆ. ಪಿಯು ಫಲಿತಾಂಶ ಬಂದು 4 ತಿಂಗಳಾದರೂ ದಾಖಲಾತಿ ಸಾಧ್ಯವಾಗಿಲ್ಲ ಎಂದು ವಿವರಿಸಿದರು. ಪ್ರೊ. ಎಸ್.ಎಂ.ಗೋಪಿನಾಥ್ ಇತರರಿದ್ದರು.