ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಶನಿವಾರ ನಡೆಯಬೇಕಿದ್ದ ಬಿ.ಎ.(ಬ್ಯಾಚುಲರ್ ಆಫ್ ಆರ್ಟ್ಸ್) ಕನ್ನಡ ಐಚ್ಛಿಕ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆಯಲ್ಲಿನ ಗೊಂದಲದಿಂದ ದಿಢೀರ್ ರದ್ದುಗೊಳಿಸಲಾಯಿತು. ಇದರಿಂದ ವಿವಿ ವ್ಯಾಪ್ತಿಯ ಸುಮಾರು 500ಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೇ ಮರಳುವಂತಾಯಿತು.
ಶನಿವಾರ ಬೆಳಗ್ಗೆ 9ಕ್ಕೆ ವಿವಿ ವ್ಯಾಪ್ತಿಯ 30ರಿಂದ 40 ಪದವಿ ಕಾಲೇಜುಗಳಲ್ಲಿ ಬಿ.ಎ. 6ನೇ ಸೆಮಿಸ್ಟರ್‌ನ ಕನ್ನಡ ಐಚ್ಛಿಕ ವಿಷಯ(ಪ್ರಶ್ನೆಪತ್ರಿಕೆ ಸಂಖ್ಯೆ 30632)ದಲ್ಲಿ ಪರೀಕ್ಷೆ ನಿಗದಿಯಾಗಿತ್ತು. ವಿದ್ಯಾರ್ಥಿಗಳೂ ಪರೀಕ್ಷಾ ಕೇಂದ್ರಗಳಿಗೆ ತೆರಳಿದ್ದು ಪ್ರಶ್ನೆ ಪತ್ರಿಕೆಗಳನ್ನೂ ವಿತರಿಸಲಾಗಿತ್ತು. ಆದರೆ ಪ್ರಶ್ನೆಪತ್ರಿಕೆಗಳಲ್ಲಿ ದೋಷ ಇರುವುದು ಕಂಡುಬಂದ ಬೆನ್ನಲ್ಲೇ ಎಲ್ಲ ಕೇಂದ್ರಗಳಿಂದ ಪಶ್ನೆಪತ್ರಿಕೆಗಳನ್ನು ಹಿಂಪಡೆಯಲಾಗಿದೆ.
ಶುಕ್ರವಾರ ಪದವಿ ಕಾಲೇಜುಗಳಲ್ಲಿ ಕನ್ನಡ ಪರೀಕ್ಷೆ ನಡೆದಿದ್ದು, ಆ ಪ್ರಶ್ನೆಪತ್ರಿಕೆಯಲ್ಲಿದ್ದ ಎರಡು ಪ್ರಶ್ನೆಗಳು ಇಂದಿನ ಕನ್ನಡ ಐಚ್ಛಿಕ ವಿಷಯದಲ್ಲೂ ಪುನಾರಾವರ್ತನೆ ಆಗಿರುವುದು ಪರೀಕ್ಷಾ ಕೇಂದ್ರದಲ್ಲಿ ಲಕೋಟೆ ತೆರೆದಾಗ ದೋಷ ಕಂಡುಬಂದಿತ್ತು. ಆ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿದ್ದು, ಪರೀಕ್ಷೆ ನಿಲ್ಲಿಸಲಾಯಿತು. ಇದರಿಂದ ವಿದ್ಯಾರ್ಥಿಗಳು ಗೊಂದಲಕ್ಕೀಡಾದರು.
ಐಚ್ಛಿಕ ಕನ್ನಡ ವಿಷಯ ಪ್ರಶ್ನೆಪತ್ರಿಕೆಯನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು ಲಕೋಟೆ ತೆರೆದಾಗ ಶಿರೋನಾಮ ಸರಿ ಇತ್ತು.ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಬೆಳಗ್ಗೆ ಉತ್ತರ ಪತ್ರಿಕೆ ನೀಡಲಾಗಿತ್ತು. ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಸೇರಿ ಅಗತ್ಯ ಮಾಹಿತಿ ಬರೆದಿದ್ದರು. ಆದರೆ ಪ್ರಶ್ನೆಪತ್ರಿಕೆಯಲ್ಲಿ ಗೊಂದಲ ಉಂಟಾಗಿದೆ ಎಂಬ ವಿಷಯ ತಿಳಿದು ಆತಂಕಗೊಂಡರು. ಇತ್ತ ಪರೀಕ್ಷೆ ರದ್ದುಪಡಿಸಬೇಕೆ, ಬೇರೆ ಪ್ರಶ್ನೆಪತ್ರಿಕೆ ಬರುತ್ತದೆಯೇ ಎಂಬುದು ಗೊತ್ತಾಗದೆ ಉಪನ್ಯಾಸಕರು, ಕಾಲೇಜು ಆಡಳಿತ ಮಂಡಳಿಗಳೂ ಗೊಂದಲಕ್ಕೀಡಾಗಿದ್ದವು.
ಮತ್ತೊಂದೆಡೆ ಸಮಸ್ಯೆಯ ಮಾಹಿತಿ ತಿಳಿಯುತ್ತಿದ್ದಂತೆ ಕುವೆಂಪು ವಿವಿ ಪರೀಕ್ಷೆಯನ್ನು ಮುಂದೂಡಿತು. ಎಲ್ಲ ಕಾಲೇಜುಗಳಿಗೆ ವಾಟ್ಸ್‌ಆ್ಯಪ್ ಮೂಲಕ ಮಾಹಿತಿ ರವಾನಿಸಿದೆ. ತಾಂತ್ರಿಕ ಕಾರಣದಿಂದ ಶನಿವಾರ ನಡೆಯಬೇಕಿದ್ದ ಪರೀಕ್ಷೆ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ತಿಳಿಸಲಾಗುತ್ತದೆ ಎಂದು ಸಂದೇಶ ರವಾನಿಸಿದೆ.