ಮೈಸೂರು: ರಾಷ್ಟ್ರಕವಿ ಕುವೆಂಪು ರಚನೆಯ ‘ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ’ ಘೋಷವಾಕ್ಯವನ್ನು ರಾಜ್ಯ ಸರ್ಕಾರ ಬದಲಾಯಿ ಸಿದ್ದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ನಗರದ ಡಾ.ರಾಜ್ ಕುಮಾರ್ ಉದ್ಯಾನ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಸಮಾಜಕಲ್ಯಾಣ ಇಲಾಖೆ ಅಧೀನದ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಇದ್ದ ಕುವೆಂಪು ರಚಿಸಿದ ‘ಜ್ಞಾನ ದೇಗುಲವಿದು ಕೈಮು ಗಿದು ಒಳಗೆ ಬಾ’ ಘೋಷವಾಕ್ಯವನ್ನು ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು’ ಎಂದು ಬದಲಾಯಿಸಿರುವುದು ಸರಿಯಲ್ಲ. ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು ನಮ್ಮ ರಾಜ್ಯದ ಆಸ್ತಿಯಾಗಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ಘೋಷ ವಾಕ್ಯವು ದಶಕಗಳಿಂದ ಕೋಟ್ಯಾಂತರ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪ್ರೇರಣೆಯಾಗಿದೆ. ಕೈಮುಗಿದು ಒಳಗೆ ಬಾ ಎಂದರೆ, ಅಹಂಕಾರ ತೊರೆದು, ವಿನಯಶೀಲನಾಗಿ, ಜ್ಞಾನ ಸಂಪಾದಿಸಲು ಬಾ ಎಂಬ ಅರ್ಥವನ್ನು ಸೂಚಿಸುತ್ತದೆ. ಆದರೆ, ಈ ಘೋಷವಾಕ್ಯದ ಮಹತ್ವ ಅರಿಯದೆ ಬದಲಾಯಿಸುವುದು ಸರಿಯಲ್ಲ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ಸೇನಾಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಲೆಗಳಲ್ಲಿ ಧಾರ್ಮಿಕ ಆಚರಣೆಗಳಿಗೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿ ಜನರ ಆಕ್ರೋಶದ ಬಳಿಕ ಆದೇಶವನ್ನು ಹಿಂಪಡೆದಿತ್ತು. ಇತ್ತೀಚೆಗೆ ರಾಜ್ಯ ಸರ್ಕಾರ ಹಿಂದೂ ವಿರೋಧಿಯಾಗಿ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಸೇನಾ ಪಡೆಯ ಪದಾಧಿಕಾರಿಗಳಾದ ಕೃಷ್ಣಪ್ಪ, ಎಂ.ಪಿ. ಪ್ರಭುಶಂಕರ್, ಪಿ. ಪ್ರಜೀಶ್,ಕುಮಾರ್ ಬಸಪ್ಪ, ಮಹದೇವಸ್ವಾಮಿ, ಹನುಮಂತಯ್ಯ, ರಾಮಕೃಷ್ಣೇಗೌಡ, ರಾಧಾಕೃಷ್ಣ, ವಿಷ್ಣು, ದರ್ಶನ್‌ಗೌಡ, ಪದ್ಮ, ಸ್ವಾಮಿ ಗೌಡ, ಪ್ರದೀಪ್ ಹಾಗೂ ಇತರರು ಪಾಲ್ಗೊಂಡಿದ್ದರು.