ಜಿಲ್ಲೆ

ಮಾ.13ರಂದು ನಗರದಲ್ಲಿ ಕುವೆಂಪು ಕ್ರಾಂತಿ ಕಹಳೆ: ಸಂಚಾಲಕ ಎನ್.ನಾಗೇಶ್ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ರಾಷ್ಟ್ರಕವಿ ಕುವೆಂಪು ಅವರ ವಿಚಾರ ಕ್ರಾಂತಿಗೆ ಆಹ್ವಾನ ಮತ್ತು ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ ಎರಡೂ ಯುಗಪ್ರವರ್ತಕ ಭಾಷಣಗಳಿಗೆ 50 ವರ್ಷ ತುಂಬುತ್ತಿರುವ ನೆನಪಿನಲ್ಲಿ ಮತ್ತು ಮಂಡ್ಯ ಜಿಲ್ಲೆಗೆ 85 ವರ್ಷ ತುಂಬುತ್ತಿರುವ ಹೊತ್ತಿನಲ್ಲಿ ಜಿಲ್ಲೆಯ ಪ್ರಗತಿಪರ ಸಂಘಟನೆಗಳ ಒಕ್ಕೂಟವಾದ ಜಾಗೃತ ಕರ್ನಾಟಕ ವತಿಯಿಂದ ಮಾ.13ರಂದು ನಗರದಲ್ಲಿ ಮಂಡ್ಯದ ಅಸ್ಮಿತೆ ಮತ್ತು ಕುವೆಂಪು ಕ್ರಾಂತಿ ಕಹಳೆ-50 ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಚಾಲಕ ಎನ್.ನಾಗೇಶ್ ಹೇಳಿದರು.

ಅಂದು ಬೆಳಗ್ಗೆ 10ಗಂಟೆಗೆ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ರಾಷ್ಟ್ರಧ್ವಜ, ನಾಡಧ್ವಜ, ಕುವೆಂಪು ನುಡಿಗಳ ಮೆರವಣಿಗೆಗೆ ವಿಚಾರವಾದಿಗಳಾದ ಕೆ.ಮಾಯಿಗೌಡ, ಡಾ.ಸುಜಯ್‌ಕುಮಾರ್, ಕೆ.ಬೋರಯ್ಯ, ಪ್ರೊ.ಚಂದ್ರಶೇಖರ್, ಸುನಂದಾ ಜಯರಾಂ, ಎಂ.ವಿ.ಕೃಷ್ಣ, ಲಕ್ಷ್ಮಣ್ ಚೀರನಹಳ್ಳಿ ಚಾಲನೆ ನೀಡುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

11.30ಕ್ಕೆ ರೈತ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಸುಧೀರ್‌ಕುಮಾರ್ ಮರೊಳ್ಳಿ ಪ್ರಧಾನ ಭಾಷಣ ಮಾಡಲಿದ್ದಾರೆ. ಸಾಹಿತಿ ಬಂಜಗೆರೆ ಜಯಪ್ರಕಾಶ್, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು ವಹಿಸಲಿದ್ದಾರೆ. ಅಂದು ಚಿಂತಕ ನಾ.ಸು.ನಾಗೇಶ್, ಜಾಗೃತ ಕರ್ನಾಟಕದ ಮುಖ್ಯಸ್ಥ ಡಾ.ವಾಸು, ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಕೆಂಪೂಗೌಡ, ಹಿರಿಯ ಸಾಹಿತಿ ದೇವನೂರು ಮಹಾದೇವ ಸೇರಿದಂತೆ ಹಲವು ಪಾಲ್ಗೊಳ್ಳಿದ್ದಾರೆ ಎಂದು ವಿವರಿಸಿದರು.

ಮಹಿಳಾ ಮುನ್ನಡೆಯ ಪೂರ್ಣಿಮಾ, ಜನಶಕ್ತಿ ಸಂಘಟನೆ ಸಿದ್ಧರಾಜು, ರಾಹುಲ್ ಇದ್ದರು.