ಜಿಲ್ಲೆ

ಮೈಸೂರು ಹಾರ್ಡ್ವಿಕ್ ಶಾಲೆಯಲ್ಲಿ ಕುವೆಂಪು ಜಯಂತಿ

ಸದೇಶ್ ಕಾರ್ಮಾಡ್

ಮೈಸೂರು: ನಗರದ ಹಾರ್ಡ್ವಿಕ್ ಪ್ರೌಢ ಶಾಲೆಯಲ್ಲಿ ಕುವೆಂಪು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲೇ ಅವರೊಳಗಿನ ಕಾವ್ಯ ಪ್ರತಿಭೆ ಅರಳಲು ಪ್ರಾರಂಭಿಸಿತು. ಈ ದಿಶೆಯಲ್ಲಿ ಹಾರ್ಡ್ವಿಕ್ ಶಿಕ್ಷಣ ಸಂಸ್ಥೆಗೊಂದು ಚಾರಿತ್ರಿಕ ಮಹತ್ವವಿದೆ ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ನಗರದ ಹಾರ್ಡ್ವಿಕ್ ಪ್ರೌಢಶಾಲೆ, ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗ ವತಿಯಿಂದ ಶಾಲಾ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕುವೆಂಪು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಮಂತ್ರ ಕಣ, ಶಕ್ತಿ ಕಣ… ಎನ್ನುತ್ತಲೇ ಕನ್ನಡ ಡಿಂಡಿಮ ಬಾರಿಸುತ್ತಾ ತಮ್ಮ ಲೇಖನಿ ಮಾತ್ರದಿಂದಲೇ ಕನ್ನಡವನ್ನು ವಿಶ್ವದೆತ್ತರಕ್ಕೂ ಕೊಂಡೊಯ್ದ ಸಾಹಿತ್ಯಲೋಕದ ಮೇರುಶಿಖರ ಕುವೆಂಪು ಎಂದು ಬಣ್ಣಿಸಿದರು.

ಆದಿಕವಿ ಪಂಪ ‘ಮನುಷ್ಯ ಜಾತಿ ತಾನೊಂದೇವಲಂ’ ಎಂಬ ಸಂದೇಶ ಸಾರಿದರು. ಆ ಸಂದೇಶವನ್ನು ಕುವೆಂಪು ಅರು ತಮ್ಮ ಬದುಕು ಮತ್ತು ಬರಹದ ಧ್ಯೇಯ ವಾಕ್ಯ ಮಾಡಿಕೊಂಡು ಕನ್ನಡವನ್ನು ಕಟ್ಟಿದವರು. ಅಷ್ಟು ಮಾತ್ರವಲ್ಲ, ಎಲ್ಲ ದೇಶಗಳಲ್ಲಿ ಮತ್ತು ಎಲ್ಲ ಮತಗಳಲ್ಲಿರುವ ಜಾತಿ ಪದ್ಧತಿಯನ್ನು ಸಂಪೂರ್ಣವಾಗಿ ನಿರಾಕರಿಸಿ ವಿನಾಶಗೊಳಿಸಬೇಕು. ಮತ ಮನುಜ ಮತವಾಗಬೇಕು ಪಥ ವಿಶ್ವಪಥವಾಗಬೇಕು ಎಂದು ಜಗತ್ತಿಗೆ ವಿಶ್ವಮಾನವ ಸಂದೇಶ ನೀಡಿದ ವಿಶ್ವದ ಮೊದಲ ಮಹಾಕವಿ ಕುವೆಂಪು. ಇಂತಹ ಜಗದ ಕವಿಯ, ಯುಗದ ಕವಿಯ ಜನ್ಮದಿನವನ್ನು ವಿಶ್ವಮಾನವ ದಿನಾಚರಣೆಯನ್ನಾಗಿ ನಾಡು ಆಚರಿಸುತ್ತಿರುವುದು ಇಡೀ ಜಗತ್ತೇ ಮೆಚ್ಚುವಂಥದ್ದು ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಡಾ.ಬಿ.ಸಿ. ವಿಜಯ ಕುಮಾರ್ ಮಾತನಾಡಿ, ಇವತ್ತೇನಾದರು ನಮ್ಮ ಕನ್ನಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಷ್ಟೊಂದು ಸಾಧನೆ ಮಾಡಿ ಜಾಗತಿಕವಾಗಿ ಗಮನ ಸೆಳೆದಿದೆ ಎಂದರೆ ಕನ್ನಡ ನಾಡಿನ ಇಬ್ಬರು ಮಹಾತ್ಮರು ಪ್ರಮುಖ ಕಾರಣರು. ಅವರಲ್ಲಿ ಒಬ್ಬರು ಚಲನ ಚಿತ್ರ ಜಗತ್ತಿನ ಮೇರು ನಟ ಡಾ.ರಾಜ್‌ಕುಮಾರ್, ಮತ್ತೊಬ್ಬರು ರಾಷ್ಟ್ರ ಕವಿ ಕುವೆಂಪು ಎಂದರು.

ಕುವೆಂಪು ಸ್ಮರಣೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಪೂರಕವಾದ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಭಾಷಣ ಸ್ಪರ್ಧೆಯಲ್ಲಿ 10ನೇ ತರಗತಿಯ ಹರ್ಷ (ಪ್ರ), ಬಿಂದುಶ್ರೀ(ದ್ವಿ) ಮತ್ತು ಗೀತ ಗಾಯನ ಸ್ಪರ್ಧೆಯಲ್ಲಿ ಸುರೇಶ್‌ರಾವ್(ಪ್ರ), ಕುಸುಮಾ(ದ್ವಿ), ಗೀತ ಗಾಯನ ಸ್ಪರ್ಧೆಯಲ್ಲಿ 9ನೇ ತರಗತಿಯ ರಕ್ಷಾ(ಪ್ರ), ಶಿವರಾಜ್ (ದ್ವಿ) ಬಹುಮಾನ ಪಡೆದರು.

ಪ್ರತಿಷ್ಠಾನದ ಅಧ್ಯಕ್ಷ ಎ. ಸಂಗಪ್ಪ, ಕಲಾವಿದೆ ಡಾ.ಜಮುನಾರಾಣಿ ಮಿರ್ಲೆ, ಕವಯತ್ರಿ ರೋಹಿಣಿ ಶೇಖರ್, ಮುಕ್ತಕ ಕವಿ ಎಂ. ಮುತ್ತುಸ್ವಾಮಿ, ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕ ಚಂದ್ರೇಗೌಡ, ಹಿರಿಯ ಶಿಕ್ಷಕಿ ಜೆ. ಸಬೀನಾ, ಶಿಕ್ಷಕರಾದ ಸಿ.ಷಣ್ಮಖ, ಕೃಷ್ಣನಾಯಕ್, ರಮ್ಯ, ಪುಷ್ಪಲತಾ, ಅಕ್ಕಮಹಾದೇವಿ ಇದ್ದರು.