ಜಿಲ್ಲೆ

ಕನ್ನಡದ ಹಿರಿಮೆ ಹೆಚ್ಚಿಸಿದ ಕವಿ ಕುವೆಂಪು

ಮೈಸೂರು: ಸಾಹಿತ್ಯದಲ್ಲಿ ಸಚಿವ ಸಂಪುಟ ರಚಿಸಿದ ಪ್ರತಿಭಾವಂತ ಕವಿ ಕುವೆಂಪು ಎಂದು ಶರಣು ವಿಶ್ವವಚನ ಫೌಂಡೇಷನ್‌ನ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.

ನಂಜನಗೂಡು ತಾಲೂಕಿನ ಹೊಸಕೋಟೆಯ ಶ್ರೀ ಗುರುಮಹಂತೇಶ್ವರ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಕುವೆಂಪು ಅವರು ತಮ್ಮ ಕವಿತೆಯಲ್ಲಿ ‘ನೃಪತುಂಗನೆ ಚಕ್ರವರ್ತಿ, ಪಂಪನಲ್ಲಿ ಮುಖ್ಯಮಂತ್ರಿ, ರನ್ನ ಜನ್ನ ನಾಗವರ್ಮ ರಾಘವಾಂಕ ಹರಿಹರ ಬಸವೇಶ್ವರ ನಾರಣಪ್ಪ ಸರ್ವಜ್ಞ ಷಡಕ್ಷರ ಸರಸ್ವತಿಯೇ ರಚಿಸಿದೊಂದು ನಿತ್ಯ ಸಚಿವಮಂಡಲ ತನಗೆ ರುಚಿರ ಕುಂಡಲ’ ಎಂದು ಹೇಳುವ ಮೂಲಕ ಸಾಹಿತ್ಯದ ಹಿರಿಮೆಯನ್ನು ಹೆಚ್ಚಿಸಿದರು. ಪ್ರಚಲಿತದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಕುರಿತು ಕವಿತೆ ರಚಿಸಿದಾಗ ಕವಿತೆ ಬೇಗ ಜನಸಾಮಾನ್ಯರಿಗೂ ತಲುಪುತ್ತದೆ ಎಂದರು.


11ನೇ ಶತಮಾನದ ಅಂತ್ಯದವರೆಗೆ ರಚಿತವಾದ ಸಾಹಿತ್ಯ ಪಾಂಡಿತ್ಯಕ್ಕಾಗಿ ಸಾಹಿತ್ಯ, ಸಾಹಿತ್ಯಕ್ಕಾಗಿ ಸಾಹಿತ್ಯ, ರಾಜರನ್ನು ಓಲೈಸುವುದಕ್ಕಾಗಿ ಸಾಹಿತ್ಯ ಎಂಬ ಪರಿಸ್ಥಿತಿಯಿತ್ತು. ಹನ್ನೆರಡನೆಯ ಶತಮಾನದ ಬಸವಾದಿ ಶರಣರು ಜನಸಾಮಾನ್ಯರಿಗಾಗಿ ಸಾಹಿತ್ಯ ರಚಿಸಿದರ ಫಲವಾಗಿ ಇಂದು ವಿದ್ಯೆ ಕಲಿತ ಎಲ್ಲರೂ ಒಂದಲ್ಲ ಒಂದು ರೀತಿಯ ಕೃತಿ ರಚನೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಯಿತು. ಬಿ.ಎಲ್.ರೈಸ್ ಬಿಳಿಕನ್ನಡಿಗ ಎಂದೇ ಚಿರಪರಿಚಿತರು. ಮೂಲತಃ ಪರದೇಶಿಯರಾಗಿದ್ದರೂ, ಕನ್ನಡನಾಡಿನ ಬಗ್ಗೆ ಅವರಿಗೆ ಅಪಾರ ಪ್ರೇಮವಿತ್ತು ಎಂದರು.
ಸಂಸ್ಥೆ ಅಧ್ಯಕ್ಷ ಶ್ರೀ ಗುರುಸ್ವಾಮಿ, ಕಾರ್ಯದರ್ಶಿ ಪ್ರಭುಸ್ವಾಮಿ, ನಿರ್ದೇಶಕರಾದ ನಂಜುಂಡಸ್ವಾಮಿ, ಮಧು, ದಯಾಳು, ಪ್ರಸಾದ್, ಮುಖ್ಯಶಿಕ್ಷಕಿ ಶೋಭ ಇತರರಿದ್ದರು.