ಜಿಲ್ಲೆ

ಕುವೆಂಪು ಬ್ರಾಹ್ಮಣ ದ್ವೇಷಿ ಅಲ್ಲ : ಸಾಹಿತಿ ಬರಗೂರು ರಾಮಚಂದ್ರಪ್ಪ

ಮೈಸೂರು: ಕುವೆಂಪು ಅವರನ್ನು ಬ್ರಾಹ್ಮಣ ದ್ವೇಷಿ ಎಂದು ಕೆಲವರು ಹೇಳುತ್ತಾರೆ. ಆದರೆ, ಅವರಿಗೆ ಯಾವ ಧರ್ಮ, ಜಾತಿಯ ಬಗೆಗೂ ದ್ವೇಷ ಇರಲಿಲ್ಲ ಎಂದು ಸಾಹಿತಿ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.

ವಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಂುನ ಸಂಸ್ಥೆ ವತಿಯಿಂದ ಬಿಎಂಶ್ರೀ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕುವೆಂಪು ಜನ್ಮ ದಿನೋತ್ಸವ, ಕುವೆಂಪು ಚಿತ್ರಕೂಟ ಉದ್ಘಾಟನೆ ಮತ್ತು ಮತ್ತೆ ಮತ್ತೆ ಕುವೆಂಪು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಕುವೆಂಪು ಅವರು ಬ್ರಾಹ್ಮಣರಾದ ರಾಮಕೃಷ್ಣ ಪರಮಹಂಸರನ್ನು ಗುರುವಾಗಿ ಸ್ವೀಕರಿಸಿದ್ದರು. ಶ್ರೀರಾಮಾಯಣ ದರ್ಶನಂ ಕೃತಿಯನ್ನು ಗುರು ವೆಂಕಣ್ಣಯ್ಯಗೆ ಅರ್ಪಿಸಿದ್ದಾರೆ. ವರಕವಿ ಬೇಂದ್ರೆ ಅವರು ಕುವೆಂಪು ಜಗದ ಕವಿ ಯುಗದ ಕವಿ ಎಂದು ಕರೆದಿದ್ದಾರೆ ಎಂದು ಸ್ಮರಿಸಿದರು.

ಕುವೆಂಪು ಅವರಿಗೆ ಸರ್ಕಾರ ರಾಷ್ಟ್ರಕವಿ ಮನ್ನಣೆ ಕೊಟ್ಟಿದೆ. ನಾವು ಅವರನ್ನು ವಿಶ್ವಕವಿ ಎಂದು ಕರೆಯುತ್ತೇವೆ. ಅವರ ಇಡೀ ಸಾಹಿತ್ಯ ಓದಿದರೆ ಸ್ಥಳೀಯತೆ, ರಾಷ್ಟ್ರೀಯತೆ, ಅಂತಾರಾಷ್ಟ್ರೀಯತೆ ಇದೆ. ಏಕಕಾಲಕ್ಕೆ ರಾಷ್ಟ್ರೀಯ- ಅಂತಾರಾಷ್ಟ್ರೀಯ ಆಗಬಹುದಾದ ವಿಚಾರ ಕೊಟ್ಟವರು ಕುವೆಂಪು ಎಂದು ಹೇಳಿದರು.

ಧಾರವಾಡದಲ್ಲಿ 1957ರಲ್ಲಿ ನಡೆದ 37ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕುವೆಂಪು ಒಕ್ಕೂಟ ವ್ಯವಸ್ಥೆಯನ್ನು ತಾಯಿ ಮಗಳ ಸಂಬಂಧಕ್ಕೆ ಹೋಲಿಸಿದ್ದರು. ಆದರೆ ಪ್ರಸ್ತುತ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುತ್ತಿರುವುದನ್ನು ಕಾಣುತ್ತಿದ್ದೇವೆ. ನಾವಿಂದು ಭಯೋತ್ಪಾದನೆ, ಯುದ್ಧೋತ್ಪಾದನೆ, ಮಕ್ಕಳಹತ್ಯೆ, ದ್ವೇಷ ಉತ್ಪಾದನೆಯ ಕಾಲದಲ್ಲಿದ್ದೇವೆ. ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟ ಇಲ್ಲದಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಕುಲಪತಿ ಪ್ರೊ.ಕೆ. ಚಿದಾನಂದಗೌಡ, ಕುವೆಂಪು ಪುತ್ರಿ ತಾರಿಣಿ, ಬೆಂಗಳೂರಿನ ಎಂ. ಚಂದ್ರಶೇಖರ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಎಂ.ಸಿ. ನರೇಂದ್ರ, ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ವಿ.ಆರ್. ಶೈಲಜ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ಎನ್.ಕೆ. ಲೋಲಾಕ್ಷಿ, ಪ್ರಸಾರಾಂಗದ ನಿರ್ದೇಶಕ ಡಾ.ನಂಜಯ್ಯ ಹೊಂಗನೂರು ಹಾಗೂ ಇತರರು ಇದ್ದರು.