ಜಿಲ್ಲೆ

ಕುವೆಂಪು ನಿಸರ್ಗ ಸಂಸ್ಕೃತಿ ಮಹತ್ವ ಸಾರಿದ ಕವಿ

ಎ. ಆರ್. ರಘುರಾಮ

ಸಕಲೇಶಪುರ : ಮಲೆನಾಡಿನ ಸಂಪೂರ್ಣ ಚಿತ್ರಣವನ್ನು ಕುವೆಂಪು ತಮ್ಮ ಕವಿತೆ ಹಾಗೂ ಕೃತಿಯಲ್ಲಿ ಹಿಡಿದಿಟ್ಟು ನಿಸರ್ಗ ಸಂಸ್ಕೃತಿಯ ಮಹತ್ವವನ್ನು ಸಾರಿದ್ದಾರೆ ಎಂದು ಜೆಎಸ್‌ಎಸ್ ಶಾಲೆಯ ಪ್ರಾಂಶುಪಾಲ ಶಿವಕುಮಾರ್ ಹೇಳಿದರು.
ಪಟ್ಟಣದ ಅಚೀವರ್ಸ್‌ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಂಗಳವಾರ ಹಮ್ಮಿಕೊಂಡಿದ್ದ ಕುವೆಂಪು ರಚಿತ ಗೀತ ಗಾಯನ ಸ್ಪರ್ಧೆಯಲ್ಲಿ ಅವರು ಮಾತನಾಡಿದರು. ಇಂದು ಬಹುತೇಕ ಬರಹಗಾರರ ಬರೆಯುವುದೇ ಬೇರೆ, ಬದುಕುವುದೇ ಬೇರೆ ರೀತಿ ಆಗಿದೆ. ಅಂದು ಕವಿಗಳು ಹೃದಯದ ಭಾವನೆಯನ್ನೇ ಬರೆಯುತ್ತಿದ್ದರು. ಆದರೆ ಇಂದು ಮತ್ತೊಬ್ಬರ ಮೆಚ್ಚುಗೆ ಗಳಿಸಲು ಕವಿಗಳು ಬರೆಯುತ್ತಿದ್ದಾರೆ. ಕೇವಲ ಓಲೈಕೆಗಾಗಿ ಬರೆಯುವುದು ಬರಹವೇ ಅಲ್ಲ ಎಂದವರು ಹೇಳಿದರು.
ಯಾವುದೇ ಕಟ್ಟುಪಾಡುಗಳಿಗೆ ಒಳಗಾಗದೆ ದಿವ್ಯದರ್ಶನದ ಮೂಲಕ ಕುವೆಂಪು ಅವರು ರಚಿಸಿದ ಗೀತೆಗಳು ಕನ್ನಡ ಸಾಹಿತ್ಯದಲ್ಲಿ ಶಾಶ್ವತ ಸ್ಥಾನ ಪಡೆದಿದೆ. ಗೀತೆ ರಚನಕಾರರಿಗೆ ಕುವೆಂಪು ದೊಡ್ಡ ಮಾದರಿ ಎಂದು ಅವರು ನುಡಿದರು.
ರಾಮಾಯಣ ದರ್ಶನವನ್ನು ಕನ್ನಡದಲ್ಲಿ ಕಟ್ಟಿಕೊಡುವ ಮೂಲಕ ರಾಷಟ್ವೆಕವಿ ಎನಿಸಿಕೊಂಡ ಕುವೆಂಪು ಅವರ ಬದುಕು ಮತ್ತು ಬರಹವನ್ನು ವಿದ್ಯಾರ್ಥಿಗಳು ಓದಬೇಕು. ಇಂತಹ ಕೆಲಸಕ್ಕೆ ಕನ್ನಡ ಪರ ಸಂಘ ಸಂಸ್ಥೆಗಳು ಪ್ರೇರಣೆ ನೀಡಿ ಕನ್ನಡ ಭಾಷೆ ಮತ್ತು ಸಾಹಿತ್ಯ ಪ್ರಸರಣಕ್ಕೆ ಬೆಂಬಲಿಸಬೇಕು ಎಂದರು.
ಕಸಾಪ ತಾಲೂಕು ಅಧ್ಯಕ್ಷೆ ಶಾರದಾ ಗುರುಮೂರ್ತಿ ಮಾತನಾಡಿ, ಕನ್ನಡ ಶ್ರೇಷ್ಠತೆಯನ್ನು ಎತ್ತಿಹಿಡಿದ ಅಗ್ರಗಣ್ಯ ಸಾಹಿತಿಗಳಲ್ಲಿ ಕುವೆಂಪು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಅವರು ತೋರಿದ ದಾರಿಯಲ್ಲಿ ಯುವ ಜನರು ಸಾಗಿದರೆ ಕನ್ನಡ ಸಾಹಿತ್ಯ ಮುಂದಿನ ಪೀಳಿಗೆಗೆ ಹೊಸರೂಪ ಪಡೆಯುತ್ತದೆ ಎಂದರು.
ವಿಜೇತರು: ಗೀತ ಗಾಯನ ಸ್ಪರ್ಧೆಯಲ್ಲಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಿಂಚನಾ (ಪ್ರ) ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ರಕ್ಷಿತ್ (ದ್ವಿ) ಸ್ಥಾನ ಪಡೆದುಕೊಂಡರು.
ಕಸಾಪ ಕಾರ್ಯದರ್ಶಿ ಯೋಗೇಶ್, ಪ್ರಾಂಶುಪಾಲ್ ಜುಲ್ಫೀಕರ್, ಕಸಾಪ ಪದಾಧಿಕಾರಿಗಳಾದ ನಲ್ಲುಲ್ಲಿ ಸತೀಶ್, ಮೀನಾಕ್ಷಿ, ವಿಶ್ವಾಸಗೌಡ ಇತರರು ಇದ್ದರು.