ತಿ.ನರಸೀಪುರ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವನ್ನು ಆಚರಿಸಲಾಯಿತು. ವೈ.ಎನ್.ರಾಮಸ್ವಾಮಿ, ಕೆ.ಆರ್.ಷಣ್ಮುಖಸ್ವಾಮಿ, ಟಿ.ಜಿ.ಸುರೇಶ್ ಆಚಾರ್, ಕೃಷ್ಣ, ಶೋಭಾ, ಕರೋಹಟ್ಟಿ ಪ್ರಭುಸ್ವಾಮಿ, ತಿರುಮಕೂಡಲು ಲಕ್ಷ್ಮಣ, ಶ್ರೀನಿವಾಸ್ ಮತ್ತಿತರರಿದ್ದರು. 
ಜಿಲ್ಲೆ

ಕುವೆಂಪು ಜನಮಾನಸದಲ್ಲಿ ಅಜರಾಮರ

ವಸಂತಕುಮಾರ್ ಬಿ

ತಿ.ನರಸೀಪುರ: ಜೀವನಾನುಭವ, ವೈಚಾರಿಕತೆ, ಪ್ರಕೃತಿ ಸೌಂದರ್ಯದ ಆಲಾಪನೆ ಜತೆ ವಿಶ್ವಮಾನವ ಸಂದೇಶ ಕೊಟ್ಟ ಕುವೆಂಪು ಕನ್ನಡಿಗರ ಮನಸ್ಸಿನಲ್ಲಿ ಅಜರಾಮರರಾಗಿದ್ದಾರೆ ಎಂದು ಬನ್ನೂರು ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ವೈ.ಎನ್.ರಾಮಸ್ವಾಮಿ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ಅವರ 112ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಕುವೆಂಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಕುವೆಂಪು ರಚಿಸಿದ ಕವಿತೆಗಳೇ ಅವರ ಜೀವನದ ಬಗ್ಗೆ ತಿಳಿಸುವ ಕೈಗನ್ನಡಿಯಾಗಿವೆ. ಓ ನನ್ನ ಚೇತನ ಆಗು ನೀ ಅನಿಕೇತನ’ ಕವಿತೆ ಮೂಲಕ ಪ್ರಪಂಚಕ್ಕೆ ವಿಶ್ವಮಾನವ ಸಂದೇಶ ನೀಡಿ, ಸಾಹಿತ್ಯದ ಸಿಂಚನ ಉಣಬಡಿಸಿ ಜನರಲ್ಲಿ ಮಾನವೀಯ ಮೌಲ್ಯ ವೃದ್ಧಿಸಲು ಪ್ರೇರಣೆ ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ರಾಷ್ಟ್ರಕವಿ ಕುವೆಂಪು ಅವರು ಪ್ರತಿಪಾದಿಸಿದ ಪಂಚಶೀಲ ತತ್ವ ವೈಯಕ್ತಿಕ ಮತ್ತು ಸಾಮುದಾಯಿಕ ಹಂತದಲ್ಲಿ ಸರ್ವರ ಏಳ್ಗೆಯನ್ನು ಬಯಸುವ ಶ್ರೇಷ್ಟ ಚಿಂತನೆಯಾಗಿದೆ. ಮನುಜಮತವೇ ಮುಖ್ಯ ಎಂಬ ಆದರ್ಶ ಕ್ಷೀಣಿಸಿ ಇಂದು ಜಾತಿ, ಧರ್ಮಗಳ ಸಂಕುಚಿತತೆ ಹೆಚ್ಚಿದೆ. ಮನುಷ್ಯ ಊರು, ರಾಜ್ಯ, ದೇಶಗಳಿಗೆ ಅಂಟಿಕೊಂಡು ವಿಶ್ವಪಥವನ್ನು ಮರೆತಿದ್ದಾನೆ ಎಂದರು.

ಕುವೆಂಪು ಅವರು ಸರ್ವ ಜನಾಂಗಗಳ ಭೌತಿಕ, ಆಧ್ಯಾತ್ಮಿಕ, ಕೌಟುಂಬಿಕ ಹೀಗೆ ಸರ್ವಸ್ತರದ ಅಭಿವೃದ್ಧಿಯನ್ನು ಬಯಸಿದವರು. ಈ ದಿಶೆಯಲ್ಲಿ ತಾವು ನಡೆಯುತ್ತಿರುವ ಹಾದಿಯೆಡೆಗೆ ವಿಮರ್ಶಾತ್ಮಕ ದೃಷ್ಟಿಕೋನವನ್ನು ರೂಢಿಸಿಕೊಂಡು ಸಮನ್ವಯತೆಯ ಸೂತ್ರವನ್ನು ಜಗತ್ತಿಗೆ ನೀಡಿದವರು ಎಂದರು.
ಕುವೆಂಪು ವಿಚಾರಧಾರೆಗಳು ಪ್ರಸ್ತುತ ಸಮಾಜಕ್ಕೆ ಅಗತ್ಯವಾಗಿದ್ದು, ಆದರ್ಶ ಜೀವನಕ್ಕೆ ಅವಶ್ಯಕವಾಗಿದೆ ಎಂದ ಅವರು, ಕುವೆಂಪು ರಚಿಸಿರುವ ಜ್ಞಾನಪೀಠ ಪುರಸ್ಕೃತ ಕೃತಿ ಶ್ರೀ ರಾಮಾಯಣ ದರ್ಶನಂ ಶ್ರೇಷ್ಟ ಕೃತಿಯಾಗಿದೆ ಎಂದರು.

ಕಸಾಪ ಮಾಜಿ ಅಧ್ಯಕ್ಷ ಕೆ.ಆರ್.ಷಣ್ಮುಖಸ್ವಾಮಿ ಮಾತನಾಡಿ, ಮಹಾಕವಿಗಳಾದ ವಾಲ್ಮೀಕಿ, ವೇದವ್ಯಾಸರು, ಕಾಳಿದಾಸರಂತಹ ಕವಿಗಳ ಸಾಲಿಗೆ ರಾಷ್ಟ್ರಕವಿ ಕುವೆಂಪು ಅವರು ಸೇರಲಿದ್ದಾರೆ. ಶ್ರೀ ರಾಮಾಯಣ ದರ್ಶನಂ, ಕಾನೂರು ಸುಬ್ಬಮ್ಮ ಹೆಗ್ಗಡತಿ, ಮಲೆಗಳಲ್ಲಿ ಮಧುಮಗಳು ಮುಂತಾದ ಮೇರು ಗ್ರಂಥಗಳನ್ನು ರಚಿಸಿದ ಕೀರ್ತಿ ಕುವೆಂಪು ಅವರದ್ದು. ಒಮ್ಮೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಮೈಸೂರಿಗೆ ಬಂದಾಗ ಕುವೆಂಪು ಅವರನ್ನು ಭೇಟಿಯಾಗಿ ಶ್ರೀ ರಾಮಾಯಣ ದರ್ಶನಂ ಕೃತಿ ಬಗ್ಗೆ ತಿಳಿದುಕೊಂಡಿದ್ದರು ಎಂದು ಹೇಳಿದರು. ತಹಸೀಲ್ದಾರ್ ಟಿ.ಜಿ.ಸುರೇಶ್ ಆಚಾರ್, ತಾಲೂಕು ಪಂಚಾಯಿತಿ ಇಒ ಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ, ಕರೋಹಟ್ಟಿ ಪ್ರಭುಸ್ವಾಮಿ, ತಿರುಮಕೂಡಲು ಲಕ್ಷ್ಮಣ, ಶ್ರೀನಿವಾಸ್, ತಾಲೂಕು ಕಚೇರಿಯ ರಾಜೇಶ್ ಮತ್ತಿತರರಿದ್ದರು.