ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜಯಂತಿ ಪ್ರಯುಕ್ತ ಜೆಎಸ್‌ಎಸ್ ಮಹಾವಿದ್ಯಾಪೀಠದ ವತಿಯಿಂದ ಆಯೋಜಿಸಿದ್ದ ‘ಪ್ರಸಾದ’ ಲೇಖನ ಸ್ಪರ್ಧೆ-2023ರಲ್ಲಿ ಊಟಿ ರಸ್ತೆಯ ಜೆಎಸ್‌ಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಆರ್. ಕುಸುಮಾಬಾಯಿ ಪ್ರಥಮ ಬಹುಮಾನ ಪಡೆದಿದ್ದಾರೆ.
ಹುಣಸೂರು ತಾಲೂಕಿನ ಹನಗೋಡು ಸರ್ಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಎ.ಎಂ.ಚೈತ್ರಾ ದ್ವಿತೀಯ ಹಾಗೂ ಸಕಲೇಶಪುರದ ಅಚೀವರ್ಸ್ ಪ್ರಜ್ಞಾ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಟಿ.ಜಿ.ಲಕ್ಷ್ಮೀ ತೃತೀಯ ಬಹುಮಾನ ಪಡೆದಿದ್ದಾರೆ.
ಉಳಿದಂತೆ ಕೊಳ್ಳೇಗಾಲದ ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಎಸ್.ಭವಾನಿ, ಗುಂಡ್ಲುಪೇಟೆಯ ಶ್ರೀಮತಿ ಕೆ.ಎಸ್. ನಾಗರತ್ನಮ್ಮ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಲೋಕೇಶ್, ಮೈಸೂರಿನ ಶೇಷಾದ್ರಿಪುರಂ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕೆ.ಸಿ. ಭೂಮಿಕಾ ಕ್ರಮವಾಗಿ ನಂತರದ ಬಹುಮಾನ ಪಡೆದಿದ್ದಾರೆ.
ಜೆಎಸ್‌ಎಸ್ ಮಹಾವಿದ್ಯಾಪೀಠವು ಹನ್ನೆರಡು ವರ್ಷಗಳಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಸಾದ ಲೇಖನ ಸ್ಪರ್ಧೆಯನ್ನು ಏರ್ಪಡಿಸುತ್ತಿದೆ. ಅಂತೆಯೆ, 2022-23ನೇ ಸಾಲಿನಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಹಾಗೂ ಮಡಿಕೇರಿ ಜಿಲ್ಲೆಗಳ (ಪದವಿಪೂರ್ವ, ಪದವಿ, ಸ್ನಾತಕೋತ್ತರ ಕೇಂದ್ರಗಳು, ಪಾಲಿಟೆಕ್ನಿಕ್ ಸಂಸ್ಥೆಗಳು) ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ‘ವನ್ಯಜೀವಿಗಳು ಮತ್ತು ಮಾನವ ಸಂಘರ್ಷ’ ಎಂಬ ವಿಷಯ ಕುರಿತು ಲೇಖನ ಸ್ಪರ್ಧೆ ಏರ್ಪಡಿಸಲಾಗಿತ್ತು. 60 ಕಾಲೇಜುಗಳಿಂದ ಒಟ್ಟು 259 ಲೇಖನಗಳು ಬಂದಿದ್ದವು. ಪ್ರಬಂಧ ಪರಿಶೀಲನಾ ಸಮಿತಿಯ ಶಿಫಾರಸಿನಂತೆ ವಿದ್ಯಾರ್ಥಿಗಳು ಬಹುಮಾನಗಳಿಗೆ ಆಯ್ಕೆಯಾಗಿದ್ದಾರೆ. ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 108ನೇ ಜಯಂತಿ ಮಹೋತ್ಸವ ಆ.29ರಂದು ಮೈಸೂರಿನ ಶ್ರೀ ಸುತ್ತೂರು ಮಠದಲ್ಲಿ ಜರುಗಲಿದ್ದು, ಅಂದು ನಡೆಯುವ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.