ಕುಷ್ಟಗಿ: ತಮಿಳುನಾಡಿಗೆ ವಲಸೆ ಹೋಗಿ ಬಂದ ತೊನಸಿಹಾಳ ತಾಂಡಾದವರನ್ನು ತಾಲೂಕಿನ ಕೇಸೂರು ಹೊರವಲಯದ ಕಸ್ತೂರಬಾ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲು ಕೇಸೂರು ಗ್ರಾಮಸ್ಥರು ಶನಿವಾರ ಆಕ್ಷೇಪ ವ್ಯಕ್ತಪಡಿಸಿದರು.
ತೊನಸಿಹಾಳ ತಾಂಡಾದ 10 ಪುರುಷರು ಸೇರಿ 17ಜನ ಸ್ವಗ್ರಾಮಕ್ಕೆ ಹಿಂತಿರುಗಿದ್ದು, ತಾಂಡಾದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಮೂಲ ಸೌಕರ್ಯ ಇಲ್ಲ ಎಂಬ ಕಾರಣಕ್ಕೆ ಸಮೀಪದ ಕೇಸೂರು ಹೊರವಲಯದ ಕಸ್ತೂರಬಾ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗುತ್ತಿತ್ತು. ವಿಷಯ ತಿಳಿದು ವಸತಿ ಶಾಲೆಗೆ ಬಂದ ಕೇಸೂರು ಗ್ರಾಮಸ್ಥರು ಕ್ವಾರಂಟೈನ್ ಮಾಡದಂತೆ ಅಡ್ಡಿಪಡಿಸಿದರು. ಗ್ರಾಪಂ ಪಿಡಿಒ ನಾಗರತ್ನಾ ಭಾಗ್ಯದ ತಿಳಿ ಹೇಳಲೆತ್ನಿಸಿದರೂ ಪ್ರಯೋಜನವಾಗಲಿಲ್ಲ.
ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಎಂ.ಸಿದ್ದೇಶ ಹಾಗೂ ಪಿಎಸ್‌ಐ ಚಿತ್ತರಂಜನ್ ಗ್ರಾಮಸ್ಥರೊಂದಿಗೆ ಮಾತನಾಡಿ, ಯಾರಿಗೂ ಯಾವುದೇ ರೀತಿ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಿ ಕ್ವಾರಂಟೈನ್ ಮಾಡಲಾಗುತ್ತಿದೆ. ಇದಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಹೇಳಿ ತಾಂಡಾದವರನ್ನು ಕ್ವಾರಂಟೈನ್ ಮಾಡಿದರು.