ಶಿಕ್ಷಕರ ದಿನಾಚರಣೆಯ ಬಾವುಟ ಖರೀದಿಸದಿರಲು ನಿರ್ಧರಿಸಿರುವ ಅನುದಾನರಹಿತ ಶಾಲೆಗಳ ಒಕ್ಕೂಟ ಹೊರಡಿಸಿರುವ ಕರಪತ್ರ. 
ಜಿಲ್ಲೆ

ವಂತಿಗೆ ನೀಡಿದರೂ ಸೌಲಭ್ಯವಿಲ್ಲ - ಶಿಕ್ಷಣ ಇಲಾಖೆಯಿಂದ ಬೆಣ್ಣೆ-ಸುಣ್ಣದ ನೀತಿ

ಶ್ರೀನಾಥ

ಕುಷ್ಟಗಿ: ಶಿಕ್ಷಕರ ದಿನಾಚರಣೆಯ ಬಾವುಟಗಳ ದರವನ್ನು ದುಪ್ಪಟ್ಟುಗೊಳಿಸಿ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಸೌಲಭ್ಯ ಅಲಭ್ಯದ ಕಾರಣ ಹೇಳಿ ಖಾಸಗಿ ಶಾಲೆಗಳು ಬಾವುಟ ಖರೀದಿಗೆ ಮುಂದಾಗಿಲ್ಲ.

ಅನುದಾನ ರಹಿತ, ಖಾಸಗಿ ಶಾಲೆಗಳೂ ಬಾವುಟ ಖರೀದಿಸುತ್ತ ಬಂದಿವೆ. ಆದರೆ, ಈವರೆಗೆ ನಯಾಪೈಸೆಯಷ್ಟೂ ಸೌಲಭ್ಯ ಸಿಕ್ಕಿಲ್ಲ ಎಂದು ಹೇಳುತ್ತಿರುವ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಸೌಲಭ್ಯ ನೀಡುವವರೆಗೆ ಬಾವುಟ ಖರೀದಿಸದಿರಲು ನಿರ್ಧರಿಸಿ ಅಭಿಯಾನ ನಡೆಸಲು ಮುಂದಾಗಿವೆ.

ಶಿಕ್ಷಕರ ಕಲ್ಯಾಣ ನಿಧಿ, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಹಾಗೂ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನದಿಂದ ರಾಜ್ಯದ ಸರ್ಕಾರಿ, ಅನುದಾನಿತ ಬೋಧಕ ವರ್ಗದವರಿಗೆ ಹಾಗೂ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಅನುದಾನರಹಿತ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಬಾವುಟ ಮಾರಾಟ ಮಾಡಿದ ಹಣವನ್ನು ವಿನಿಯೋಗಿಸಲಾಗುತ್ತಿದೆ.

ಖಾಸಗಿ ಶಾಲೆಗಳಿಂದಲೂ ನಿಧಿ ಸಂಗ್ರಹಿಸುತ್ತ ಬಂದಿರುವ ಇಲಾಖೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಮಾತ್ರ ಸೌಲಭ್ಯ ನೀಡುತ್ತ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ದರ ಪರಿಷ್ಕರಣೆ: 2024ರ ಅ.10ರಂದು ನಡೆದ ನಿಧಿಗಳ ರಾಜ್ಯ ಸಮಿತಿ ಸಭೆಯಲ್ಲಿ ಶಿಕ್ಷಕರ ದಿನಾಚರಣೆ ಬಾವುಟಗಳ ದರಗಳನ್ನು ಪರಿಷ್ಕರಿಸಲಾಗಿದೆ. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಈ ಮೊದಲು 5 ರೂ.ಗೆ ಖರೀದಸಬೇಕಿದ್ದ ಬಾವುಟಕ್ಕೆ ಸದ್ಯ 10 ರೂ. ಪಾವತಿಸಬೇಕಿದೆ.

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬಾವುಟದ ದರ 10ರೂ.ಯಿಂದ 20ರೂ.ಗೆ ಏರಿಸಲಾಗಿದೆ. ಈ ಮೊದಲು 25ರೂ. ನೀಡಿ ಖರೀದಿಸುತ್ತಿದ್ದ ಪಪೂ ಕಾಲೇಜು ವಿದ್ಯಾರ್ಥಿಗಳು ಇದೀಗ 40ರೂ. ಪಾವತಿಸಬೇಕು. ಇನ್ನು ಪ್ರಾಥಮಿಕ ಶಾಲಾ ಶಿಕ್ಷಕರಿಗೆ 50ರೂ. ನಿಗದಿಯಾಗಿದ್ದ ದರ 100ರೂ.ಗೆ ಏರಿಕೆಯಾಗಿದೆ.

ಪ್ರೌಢಶಾಲಾ ಶಿಕ್ಷಕರು 75ರೂ.ಗಳ ಬದಲು 150ರೂ. ಪಾವತಿಸಬೇಕಿದೆ. ಪಪೂ ಹಾಗೂ ಇತರ ಎಲ್ಲ ವಿದ್ಯಾಸಂಸ್ಥೆಗಳ ಶಿಕ್ಷಕರು 200ರೂ. ಪಾವತಿಸಿ ಬಾವುಟ ಖರೀದಿಸುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು 2025ರ ಜು.16ರಂದು ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಶಿಕ್ಷಕರ ದಿನಾಚರಣೆ ಬಾವುಟಗಳ ಖರೀದಿಯಲ್ಲಿ ಖಾಸಗಿ ಶಾಲೆಗಳ ಪಾಲು ಸರಿಸಮಾನವಾಗಿದ್ದರೂ ಸೌಲಭ್ಯ ನೀಡುವಲ್ಲಿ ತಾರತಮ್ಯ ಅನುಸರಿಸಲಾಗುತ್ತಿದೆ ಎಂಬ ದೂರು ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳಿಂದ ಕೇಳಿ ಬರುತ್ತಿದೆ.

ಪ್ರಶಸ್ತಿ, ಸೌಲಭ್ಯಗಳಿಗೆ ಅವಕಾಶವಿಲ್ಲ!

ಖಾಸಗಿ ಶಾಲೆಗಳಲ್ಲಿಯೂ ಪ್ರತಿಭಾನ್ವಿತ ಶಿಕ್ಷಕರಿದ್ದಾರೆ. ವಿವಿಧ ನಿಧಿಗಳಿಗೆ ವಂತಿಗೆ ಸಂಗ್ರಹಿಸುವ ಇಲಾಖೆ ಈವರೆಗೆ ಖಾಸಗಿ ಶಾಲೆಯ ಯಾವೊಬ್ಬ ಶಿಕ್ಷಕರನ್ನೂ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪರಿಗಣಿಸಿಲ್ಲ.

ವಿವಿಧ ನಿಧಿಗಳ ಯೋಜನೆಯಡಿ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಸವಲತ್ತುಗಳಿಗೆ ಆನ್‌ಲೈನ್ ಹಾಗೂ ಆಫ್‌ಲೈನ್ ಅರ್ಜಿ ಸಲ್ಲಿಸುವಂತೆ ಆಯುಕ್ತರು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಆದರೆ, ಖಾಸಗಿ ಶಾಲೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಲ್ಲ.

ಇಲಾಖೆ ಕಾರ್ಯಕ್ರಮಗಳಿಗೆ ಶಾಲು, ಹಾರ-ತುರಾಯಿಗಳು ಸೇರಿ ಎಲ್ಲ ಖರ್ಚುಗಳನ್ನು ಖಾಸಗಿ ಶಾಲೆಗಳ ಪ್ರಾಯೋಜಕತ್ವದಲ್ಲಿಯೇ ಸರಿದೂಗಿಸುವ ಇಲಾಖೆ ಸೌಲಭ್ಯ ನೀಡುವಲ್ಲಿ ಮಲತಾಯಿ ಧೋರಣೆ ತೋರುತ್ತಿದೆ ಎಂಬುದು ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಅಳಲಾಗಿದೆ.

=======

ಅನುದಾನ ರಹಿತ, ಖಾಸಗಿ ಶಾಲೆಗಳೂ ಶಿಕ್ಷಕರ ದಿನಾಚರಣೆಯ ಬಾವುಟ ಖರೀದಿಸಬೇಕಿದೆ. ರಾಜ್ಯದ ವಿವಿಧ ಶಾಲೆಗಳಲ್ಲಿ ಅರ್ಧದಷ್ಟು ಮಕ್ಕಳು ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಶಿಕ್ಷಕರ ಕಲ್ಯಾಣ ಹಾಗೂ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಗೆ ಅರ್ಧದಷ್ಟು ವಂತಿಗೆ ಅನುದಾನ ರಹಿತ ಶಾಲೆಗಳಿಂದ ಸಂಗ್ರಹವಾಗುತ್ತಿದೆ. ನಿಧಿಗೆ ವಂತಿಗೆ ಸಂಗ್ರಹಿಸುವ ಇಲಾಖೆ ಈವರೆಗೆ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಹೀಗಾಗಿ ಸರ್ಕಾರ ಸೌಲಭ್ಯ ನೀಡುವವರೆಗೆ ಬಾವುಟ ಖರೀದಿಸದಿರಲು ನಿರ್ಧರಿಸಿದ್ದೇವೆ. ಕೆಲವೆಡೆ ಇಲಾಖೆ ಅಧಿಕಾರಿಗಳ ಒತ್ತಡಕ್ಕೆ ಮಣಿದು ಖರೀದಿಸಲಾಗುತ್ತಿದೆ.

ಜಿ.ಎಸ್.ಅರುಣಕುಮಾರ್, ನಿರ್ದೇಶಕ, ಅನುದಾನ ರಹಿತ ಮತ್ತು ಮಾನ್ಯತೆ ಪಡೆದ ಶಾಲೆಗಳ ಒಕ್ಕೂಟ(ಒಯುಆರ್ ಸ್ಕೂಲ್ಸ್), ಗುಬ್ಬಿ ತುಮಕೂರು ಜಿಲ್ಲೆ

=======

ಶಿಕ್ಷಕರ ದಿನಾಚರಣೆಯ ಬಾವುಟಗಳ ದರ ಪರಿಷ್ಕರಿಸಿ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಅನುದಾನ ರಹಿತ ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬಾವುಟ ಖರೀದಿಸುವುದು ಕಡ್ಡಾಯವಾಗಿದೆ. ಸಂಗ್ರಹಿಸಿದ ಬಾವುಟದ ಹಣವನ್ನು ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗುತ್ತಿದೆ. ಖಾಸಗಿ ಶಾಲಾ-ಕಾಲೇಜುಗಳಿಗೆ ಸೌಲಭ್ಯ ನೀಡುವಲ್ಲಿ ತಾರತಮ್ಯ ಕುರಿತು ಇಲಾಖೆ ಗಮನಕ್ಕೆ ತರಲಾಗುವುದು.

> ಸೋಮಶೇಖರಗೌಡ, ಡಿಡಿಪಿಐ, ಕೊಪ್ಪಳ