ಕುಷ್ಟಗಿಯಲ್ಲಿ ಗಣೇಶ ಹಬ್ಬದ ನಿಮಿತ್ತ ಪೊಲೀಸ್, ಕೆಎಸ್‌ಆರ್‌ಪಿ ಹಾಗೂ ಡಿಆರ್ ಸಿಬ್ಬಂದಿಯಿಂದ ಗುರುವಾರ ಸಂಜೆ ರೂಟ್ ಮಾರ್ಚ್ ನಡೆಯಿತು. ಹೆಚ್ಚುವರಿ ಎಸ್ಪಿ ಹೇಮಂತಕುಮಾರ್, ಸಿಪಿಐ ಯಶವಂತ ಬಿಸನಳ್ಳಿ, ಕುಷ್ಟಗಿ ಪಿಎಸ್‌ಐಗಳಾದ ಹನುಮಂತಪ್ಪ ತಳವಾರ್, ಪುಂಡಪ್ಪ ಜಾಧವ್, ತಾವರಗೇರಾ ಪಿಎಸ್‌ಐ ಚಂದ್ರಪ್ಪ ಪಾಲ್ಗೊಂಡಿದ್ದರು.  
ಜಿಲ್ಲೆ

ಸಂಭ್ರಮದ ನೆಪದಲ್ಲಿ ಶಾಂತಿ ಕದಡದಿರಿ

ಕುರುವತ್ತಿ ಶ್ರೀಕಾಂತಪ್ಪ

ಕುಷ್ಟಗಿ: ಹಬ್ಬಗಳನ್ನು ಸೌಹಾರ್ದತೆ ಸಂಕೇತವಾಗಿ ಆಚರಿಸಲಾಗುತ್ತಿದೆ. ಹಬ್ಬದ ಸಂಭ್ರಮ ಇತರರಿಗೆ ಕಿರಿಕಿರಿ ಉಂಟುಮಾಡದಿರಲಿ ಎಂದು ಹೆಚ್ಚುವರಿ ಎಸ್ಪಿ ಹೇಮಂತಕುಮಾರ್ ಹೇಳಿದರು.

ಗಣೇಶ ಹಬ್ಬದ ನಿಮಿತ್ತ ಗುರುವಾರ ಸಂಜೆ ಪಟ್ಟಣದಲ್ಲಿ ಏರ್ಪಡಿಸಿದ್ದ ರೂಟ್ ಮಾರ್ಚ್ ಆರಂಭಕ್ಕೂ ಮುನ್ನ ಮಾತನಾಡಿದರು.

ಹಬ್ಬಗಳ ಆಚರಣೆ ವೇಳೆ ಗಲಾಟೆ ಇನ್ನಿತರ ಅಹಿತಕರ ಘಟನೆ ನಡೆದರೆ ಅವುಗಳ ಪಾವಿತ್ರ್ಯತೆಗೆ ಧಕ್ಕೆ ಉಂಟಾಗುತ್ತದೆ. ಸಂಭ್ರಮದ ನೆಪದಲ್ಲಿ ಶಾಂತಿ ಕದಡುವ ಕಾರ್ಯವಾಗದಿರಲಿ ಎಂದ ಅವರು ಎಲ್ಲರೂ ಕಾನೂನು ಪಾಲನೆ ಮಾಡಬೇಕು ಎಂದರು.

ಸಿಪಿಐ ಯಶವಂತ ಬಿಸನಳ್ಳಿ ಮಾತನಾಡಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಹಬ್ಬ ಆಚರಿಸಬೇಕು. ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 132ಕಡೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ವೇಳೆ ಪೊಲೀಸ್ ಇಲಾಖೆಯ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.

ಪಿಎಸ್‌ಐಗಳಾದ ಹನುಮಂತಪ್ಪ ತಳವಾರ್, ಪುಂಡಪ್ಪ ಜಾಧವ್, ಚಂದ್ರಪ್ಪ ಸೇರಿದಂತೆ ಕುಷ್ಟಗಿ ಹಾಗೂ ತಾವರಗೇರಾ ಠಾಣೆಯ ಪೊಲೀಸ್ ಸಿಬ್ಬಂದಿ, ಕೆಎಸ್‌ಆರ್‌ಪಿ ಹಾಗೂ ಡಿಆರ್ ಸಿಬ್ಬಂದಿ ಪಾಲ್ಗೊಂಡಿದ್ದರು.