ಕುಷ್ಟಗಿ ತಾಲೂಕಿನ ಚಳಗೇರಾ ಹಿರೇಮಠದ ಲಿಂ.ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯರ 11ನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ಶ್ರೀಮಠದ ಅವರಣದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಉದ್ಘಾಟಿಸಿದರು. ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರು, ಉಜ್ಜಿನಿ ಸಿದ್ಧಲಿಂಗ ಜಗದ್ಗುರು ಹಾಗೂ ವಿವಿಧ ಮಠಾಧೀಶರು, ಗಣ್ಯರು ಇದ್ದರು.  
ಜಿಲ್ಲೆ

ಖಾಕಿ, ಖಾದಿ ಕಾವಿಧಾರಿಗಳು ಲೋಕ ಕಲ್ಯಾಣಕ್ಕೆ ಶ್ರಮಿಸಲಿ, ರಂಭಾಪುರಿ ಶ್ರೀ ಸಲಹೆ

ಕುರುವತ್ತಿ ಶ್ರೀಕಾಂತಪ್ಪ

ಕುಷ್ಟಗಿ: ಖಾದಿ, ಖಾಕಿ ಮತ್ತು ಕಾವಿಧಾರಿಗಳು ನಿರ್ಮಲ ಮನಸ್ಸಿನಿಂದ ಶ್ರಮಿಸಿದರೆ ಜನಕಲ್ಯಾಣ ಜತೆಗೆ ಲೋಕ ಕಲ್ಯಾಣವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.

ತಾಲೂಕಿನ ಚಳಗೇರಾ ಹಿರೇಮಠದ ಲಿಂ. ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳವರ 11ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ನವೀಕೃತ ಹಿರೇಮಠ ಉದ್ಘಾಟನೆ ಅಂಗವಾಗಿ ಜರುಗಿದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಗುರುವಾರ ಆಶೀರ್ವಚನ ನೀಡಿದರು.

ಧರ್ಮ ಮತ್ತು ಭಾವೈಕ್ಯತೆ ಭಾರತದ ಉಸಿರು. ನಾಡಿನ ಮಠಗಳು ಹಾಗೂ ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಸಂವರ್ಧನಾ ಕೇಂದ್ರಗಳಾಗಿವೆ. ಜನರು ಯತಾರ್ಥ ಅರಿತು ಸಾತ್ವಿಕ ಸಮೃದ್ಧ ನಾಡು ಕಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯುವ ಶಕ್ತಿಯ ಪಾತ್ರ ದೊಡ್ಡದು ಎಂದರು.

ಆಲಸ್ಯ ಮತ್ತು ದುರ್ವ್ಯಸನಗಳಿಂದ ದೂರವಾಗಿ ಸಮಾಜವನ್ನು ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಯುವ ಜನಾಂಗ ಗಟ್ಟಿ ಹೆಜ್ಜೆಯನ್ನಿಡುವ ಅಗತ್ಯವಿದೆ. ನೀರಿನಲ್ಲಿ ಸ್ನಾನ ಮಾಡಿದರೆ ಬಟ್ಟೆ ಬದಲಿಸಬಹುದು. ಅದೇ ಬೆವರಿನಲ್ಲಿ ಸ್ನಾನ ಮಾಡಿದರೆ ಇತಿಹಾಸ ಬದಲಿಸಬಹುದು. ಸರಳತೆಯ ಸಾಕಾರ ಮೂರ್ತಿ ಲಿಂ. ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯರು, ಮಾತು ಮನ ಕೃತಿಯಿಂದ ಒಂದಾಗಿ ಬಾಳಿದವರು. ಅವರ ಹಾದಿಯಲ್ಲೇ ಇಂದಿನ ವೀರಸಂಗಮೇಶ್ವರ ಶಿವಾಚಾರ್ಯರು ಸಾಗುತ್ತಿರುವುದು ಭಕ್ತರ ಹರುಷ ತಂದಿದೆ ಎಂದರು.

ನೇತೃತ್ವ ವಹಿಸಿದ ಚಳಗೇರಾ ಹಿರೇಮಠದ ವೀರಸಂಗಮೇಶ್ವರ ಶಿವಾಚಾರ್ಯ ಮಾತನಾಡಿ, ಆಧುನಿಕ ವಿಜ್ಞಾನ ಎಲ್ಲಿ ನಿರುತ್ತರವಾಗುವುದೋ ಅಲ್ಲಿಂದ ಭಾರತೀಯ ಅಧ್ಯಾತ್ಮ ಚಿಂತನೆ ಪ್ರಾರಂಭಗೊಳ್ಳುತ್ತದೆ ಎಂಬ ಡಾ.ರಾಧಾಕೃಷ್ಣನ್ ಅವರ ಮಾತಿನಂತೆ ಧರ್ಮ ಮತ್ತು ಅಧ್ಯಾತ್ಮ ಸಾಧನೆಯಲ್ಲಿ ಬಹು ದೊಡ್ಡ ಶಕ್ತಿಯಿದೆ. ಬದುಕು ಬದಲಾಗಬೇಕಾದರೆ ಬದುಕುವ ದಾರಿ ಬದಲಾಗಬೇಕಾಗುತ್ತದೆ ಎಂದರು.

ಹೈದರಾಬಾದಿನಲ್ಲಿ ವಾಸವಾಗಿರುವ ಹೊಸಳ್ಳಿಯ ಕುಮಾರಸ್ವಾಮಿ ಹಿರೇಮಠರಿಗೆ ಉದ್ಯಾನ್ಯ ಶಿಲ್ಪಿ ಪ್ರಶಸ್ತಿ ಮತ್ತು ಬೆಂಗಳೂರಿನಲ್ಲಿ ವಾಸವಾಗಿರುವ ಹಿರೇಕೊಡಗಲಿಯ ಪಂಚಾಕ್ಷರಿ ಹಿರೇಮಠಗೆ ವೀರಶೈವ ಯುವಸಿರಿ ಪ್ರಶಸ್ತಿಯನ್ನು ಉಭಯ ಜಗದ್ಗುರುಗಳು ಪ್ರದಾನ ಮಾಡಿ ಶುಭ ಹಾರೈಸಿದರು.

ಈ ಅಪೂರ್ವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಿ.ಎಸ್.ಪಾಟೀಲ, ಮಾಜಿ ಶಾಸಕರಾದ ಕೆ.ಶರಣಪ್ಪ ವಕೀಲರು, ಹಸನಸಾಬ ದೋಟಿಹಾಳ ಪಾಲ್ಗೊಂಡು ಉಭಯ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ 2 ಜೋಡಿ ಸಾಮೂಹಿಕ ವಿವಾಹ ಜರುಗಿತು. ಬಸಯ್ಯಸ್ವಾಮಿ ಹಿರೇಮಠ, ಡಾ.ಸಂಗಮೇಶ ಹಿರೇಮಠ, ಡಾ.ಲೋಕೇಶ ಟೇಕಲ್, ಲತಾ ಚಂದ್ರಹಾಸ ಹೆರೂರ, ವೀರಯ್ಯಸ್ವಾಮಿ ಹಿರೇಮಠ, ವಿಠಲ ಜಕ್ಕಾ ಸವಿತಾ ಅಶೋಕ ಛಲವಾದಿ ಇವರಿಗೆ ಗೌರವ ಗುರುರಕ್ಷೆ ನೀಡಲಾಯಿತು. ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಿ ವಹಿಸಿದ್ದರು.

ಸಮಾಂಭದಲ್ಲಿ ಮಂಗಳೂರು, ಕುಷ್ಟಗಿ, ಸಂಗೊಳ್ಳಿ, ಕೊತಬಾಳ, ಕಲಾದಗಿ, ಮೈನಳ್ಳಿ-ಬಿಕನಳ್ಳಿ, ಕುಕನೂರು, ಹಾರನಹಳ್ಳಿ, ಕೆಸೂರು-ದೋಟಿಹಾಳ, ಸಿಂಧಗಿ, ಹೆಬ್ಬಾಳ ಮಠಗಳ ಶ್ರೀಗಳು ಉಪಸ್ಥಿತರಿದ್ದರು. ಶ್ರೀ ಜಗದ್ಗುರು ರೇಣುಕಾಚಾರ್ಯರ ಮಂಗಲ ಮೂರ್ತಿಗೆ ಸ್ವರ್ಣ ಕಿರೀಟ ಧಾರಣೆ ಸೇವೆಯನ್ನು ಮುಧೋಳದ ಶ್ರೀಮತಿ ಸುನೀತಾ ಡಾ.ಅಂದಾನಯ್ಯ ಶಾಡ್ಲಗೇರಿ ಹಿರೇಮಠ ಮಾಡಿದರು.

ಬೆಳಗ್ಗೆ ಲಿಂ. ಶ್ರೀ ವಿರೂಪಾಕ್ಷ ಶಿವಾಚಾರ್ಯರ ಪಲ್ಲಕ್ಕಿ ಉತ್ಸವ ಗ್ರಾಮದಲ್ಲಿ ಜರುಗಿತು. ಕುಂಭ ಹೊತ್ತ ಮಹಿಳೆಯರು ಆರತಿ ಹಿಡಿದ ಸುಮಂಗಲೆಯರು ಹಾಗೂ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಜರುಗಿತು. ಸಮಾರಂಭದ ನಂತರ ದಾಸೋಹ ಸೇವೆ ನಡೆಯಿತು.

ವಿಜ್ಞಾನ ಉನ್ನತಿಗೆ ಬಳಕೆಯಾಗಲಿ: ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ಉಜ್ಜಿನಿ ಸಿದ್ಧಲಿಂಗ ಜಗದ್ಗುರು ಆಶೀರ್ವಚನ ನೀಡಿ, ವಿಜ್ಞಾನ ಮನುಕುಲದ ಉನ್ನತಿಗೆ ಇರಬೇಕೇ ಹೊರತು ವಿನಾಶಕ್ಕಲ್ಲ. ಭೌತಿಕ ಜೀವನ ಸಮೃದ್ಧಗೊಂಡಂತೆ ಆಂತರಿಕ ಜೀವನ ಪರಿಶುದ್ಧಗೊಳ್ಳಬೇಕಾಗಿದೆ. ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಅದರೊಂದಿಗೆ ಧರ್ಮ ಪ್ರಜ್ಞೆ ಮತ್ತು ಗುರು ಕಾರುಣ್ಯವೂ ಮುಖ್ಯ. ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಧರ್ಮದ ದಶವಿಧ ಸೂತ್ರಗಳು ಸಕಲರ ಬಾಳಿನಲ್ಲಿ ಬೆಳಕು ಮೂಡಿಸುತ್ತವೆ. ಲಿಂ. ಶ್ರೀ ವಿರೂಪಾಕ್ಷ ಶ್ರೀಗಳವರು ಅಧ್ಯಾತ್ಮ ಸಾಧಕರಾಗಿದ್ದು ವೀರಶೈವ ಧರ್ಮ ಸಂಸ್ಕೃತಿಯನ್ನು ಜನಮನಕ್ಕೆ ತಲುಪಿಸಿದ ಶ್ರೇಯಸ್ಸು ಅವರದು. ಈಗಿನ ವೀರಸಂಗಮೇಶ್ವರ ಶ್ರೀಗಳು ಮಠದ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿದ್ದಾರೆ ಎಂದರು.