ಓಂಬಡ್ಸ್‌ಪರ್ಸನ್ ಆದೇಶ ಪತ್ರ.  
ಜಿಲ್ಲೆ

ಸಾಬೀತಾದ ಗ್ರಾಪಂ ಅವ್ಯವಹಾರ!, ಸಾಮಗ್ರಿ ವೆಚ್ಚದ ನೆಪದಲ್ಲಿ ಹಣ ದುರ್ಬಳಕೆ

ಕುಷ್ಟಗಿ: ತಾಲೂಕಿನ ಮೇಣೆಧಾಳ ಗ್ರಾಪಂ ವ್ಯಾಪ್ತಿಯಲ್ಲಿ 2023-24ನೇ ಸಾಲಿನಲ್ಲಿ ನಡೆದ ನರೇಗಾ ಯೋಜನೆ ಕಾಮಗಾರಿ ಅನುಷ್ಠಾನದಲ್ಲಿನ ಅವ್ಯವಹಾರ ಸಾಬೀತಾದ ಹಿನ್ನೆಲೆಯಲ್ಲಿ ಆ ಅವಧಿಯಲ್ಲಿದ್ದ ಗ್ರಾಪಂ ಅಧ್ಯಕ್ಷ, ಪಿಡಿಒ ಹಾಗೂ ಸಹಾಯಕ ಇಂಜಿನಿಯರ್‌ರಿಂದ ತಲಾ 4.54ಲಕ್ಷ ರೂ. ವಸೂಲಿ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಪಂ ಓಂಬಡ್ಸ್‌ಪರ್ಸನ್ ವೀರಣ್ಣ ಕಮತರ್ ಜಿಪಂ ಸಿಇಒಗೆ ಶಿಫಾರಸು ಮಾಡಿ ಜ.31ರಂದು ಆದೇಶ ಹೊರಡಿಸಿದ್ದಾರೆ.

ಯಲಬುರ್ಗಾ ತಾಲೂಕಿನ ಹೊಸಳ್ಳಿಯ ರಾಜಶೇಖರ ಶ್ಯಾಗೋಟಿ ಎನ್ನುವವರು ನೀಡಿದ ದೂರು ಆಧರಿಸಿ ತನಿಖೆ ಕೈಗೊಂಡ ಓಂಬಡ್ಸ್‌ಪರ್ಸನ್ ವೀರಣ್ಣ ಕಮತರ್, ಕಾಮಗಾರಿಗಳಲ್ಲಿ ಕೇವಲ ಮೂವರಿಗೆ ಮಾತ್ರ ಕೂಲಿ ಹಣ ಪಾವತಿಸಿ ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆ ತಂದಿದ್ದಾರೆ. ಭಾಗಶಃ ಸಾಮಗ್ರಿ ಮೊತ್ತವನ್ನು ಡ್ರಾ ಮಾಡಿಕೊಂಡಿರುವುದು ನರೇಗಾ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ.

ತನಿಖೆ ವೇಳೆ ಅವ್ಯವಹಾರ ನಡೆದಿರುವುದು ದೃಢಪಟ್ಟ ಹಿನ್ನೆಲೆ ಕಾಮಗಾರಿ ಅವಧಿಯಲ್ಲಿದ್ದ ಗ್ರಾಪಂ ಅಧ್ಯಕ್ಷ ದಾವಲ್ ಬಾಷಾ, ಅಭಿವೃದ್ಧಿ ಅಧಿಕಾರಿ ಹನುಮಂತ್ರಾಯ ಹಾಗೂ ತಾಪಂ ಸಹಾಯಕ ಇಂಜಿನಿಯರ್ ನೀಲಕಂಠ ಎನ್ನುವವರಿಂದ ಕಾಮಗಾರಿ ಮೊತ್ತ ವಸೂಲಾತಿಗೆ ಶಿಫಾರಸು ಮಾಡಿದ್ದಾರೆ. ಪಿಡಿಒ ಹನುಮಂತ್ರಾಯ ಹಾಗೂ ಇಂಜಿನಿಯರ್ ನೀಲಕಂಠ ಇಂತಹ ವಿವಿಧ ಕಾಮಗಾರಿಗಳಲ್ಲಿ ಭಾಗಿಯಾಗಿರುವುದರಿಂದ ಕಾಮಗಾರಿ ಮೊತ್ತದ ವಸೂಲಾತಿ ಜತೆಗೆ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸುವಂತೆಯೂ ಶಿಫಾರಸು ಮಾಡಿದ್ದಾರೆ.

ಕಾಮಗಾರಿ ಅನುಷ್ಠಾನದಲ್ಲಿ ಯೋಜನೆಯ ಮಾರ್ಗಸೂಚಿಗಳ ಉಲ್ಲಂಘನೆಯಾಗಿರುವುದನ್ನು ಗಮನಿಸದೆ ನಿರ್ಲಕ್ಷ್ಯ ವಹಿಸಿರುವ ತಾಂತ್ರಿಕ ಸಂಯೋಜಕ ಬಸವರಾಜ ಹಾಗೂ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳರಿಗೆ ಇಂತಹ ತಪ್ಪು ಪುನರಾವರ್ತನೆಯಾಗದೆಂತೆ ಕ್ರಮ ಕೈಗೊಳ್ಳಲು ಎಚ್ಚರಿಕೆ ನೀಡುವಂತೆಯೂ ತಿಳಿಸಿದ್ದಾರೆ.

ಬೋಗಸ್ ಬಿಲ್ ಸೃಷ್ಟಿ: ಮೇಣೆಧಾಳ ಗ್ರಾಮದ ಹುಲಿಕೇರಿ ಕೆರೆಗೆ ಬದು ನಿರ್ಮಿಸುವ ಕಾಮಗಾರಿಯಲ್ಲಿ ಒಬ್ಬ ಕೂಲಿಕಾರನಿಗೆ 316ರೂ. ಪಾವತಿಸಿ ಸಾಮಗ್ರಿ ವೆಚ್ಚದ ರೂಪದಲ್ಲಿ ನಿವ್ವಳ ವೆಚ್ಚ 7.96ಲಕ್ಷ ರೂ.ಗೆ ಬೋಗಸ್ ಬಿಲ್ ಸೃಷ್ಟಿಸಿ ರಾಯಚೂರು ಜಿಲ್ಲೆ ತೊಂಡಾ ಗ್ರಾಮದ ವೆಂಡರ್ ತೇಜಶ್ವಿನಿ ಎಂಟರ್‌ಪ್ರೈಸಸ್‌ಗೆ ಒಂದೇ ದಿನ ಪಾವತಿಸಿ ಡ್ರಾ ಮಾಡಿಕೊಂಡಿದ್ದಾರೆ. ಅದೇ ಕೆರೆಗೆ ಕಲ್ಲು ಪಿಚ್ಚಿಂಗ್ ಕಾಮಗಾರಿ ಕೈಗೊಳ್ಳಲು ಇಬ್ಬರು ಕೂಲಿಕಾರರು ಕೆಲಸ ಮಾಡಿದ್ದಾರೆಂದು ಹೇಳಿ ನಿವ್ವಳ ವೆಚ್ಚ 5.66ಲಕ್ಷರ ರೂ.ಗೆ ಬೋಗಸ್ ಬಿಲ್ ಸೃಷ್ಟಿಸಿ ಅದೇ ವೆಂಡರ್‌ಗೆ ಪಾವತಿಸಿ ಡ್ರಾ ಮಾಡಿಕೊಳ್ಳುವ ಮೂಲಕ ಹಣ ದುರ್ಬಳಕೆ ಮಾಡಿಕೊಂಡಿದ್ಧಾರೆ.

ತಾಳೆಯಾಗದ ದಾಖಲೆ!: ಕಡತದಲ್ಲಿರುವ ಕಾಮಗಾರಿಯ ಜಿಪಿಎಸ್ ಫೋಟೋಗಳ ಕಾರ್ಯಾವಧಿ ಹಾಗೂ ಎನ್‌ಎಂಆರ್‌ನಲ್ಲಿರುವ ಕೆಲಸದ ಅವಧಿಗೂ ತಾಳೆಯಾಗದಿರುವುದು ತನಿಖೆ ವೇಳೆ ಗೊತ್ತಾಗಿದೆ. ಎನ್‌ಎಂಆರ್‌ಗಳಲ್ಲಿ ಅಳತೆ ಪುಸ್ತಕ ಸಂಖ್ಯೆ 15562 ಎಂದು ನಮೂದಿಸಿ ದಾಖಲೆ ಪರಿಶೀಲನೆ ವೇಳೆ ಬೇರೆ ಸಂಖ್ಯೆಯ ಅಳತೆ ಪುಸ್ತಕ ಹಾಜರುಪಡಿಸಿದ್ದಾರೆ. ಅದರಲ್ಲಿ ಅಧ್ಯಕ್ಷರ ಸಹಿ, ಮೊಹರು ಇಲ್ಲದಿರುವುದು ಅವ್ಯವಹಾರ ನಡೆದಿರುವುದಕ್ಕೆ ಪುಷ್ಟಿ ನೀಡಿದೆ. ಎಲ್ಲ ಕಾಮಗಾರಿಗಳ ಕಡತ ಪರಿಶೀಲಿಸಲಾಗಿ ಸಾಮಗ್ರಿ ಮೊತ್ತಕ್ಕಾಗಿ ಕರೆದ ದರಪಟ್ಟಿ ಆಹ್ವಾನ ಕಡತದಲ್ಲಿ ಎಲ್ಲ ಕೊಟೇಶನ್‌ಗಳಿಗೆ ದಿನಾಂಕ ನಮೂದಿಸದಿರುವುದು ಹಾಗೂ ಕೊಟೇಶನ್‌ಗಳು ಬಣ್ಣದ ಹಾಳೆಯಲ್ಲಿ ಪ್ರಿಂಟ್ ತಗೆದಿರುವುದು ಜತೆಗೆ ಕಡತದಲ್ಲಿ ಸಾಮಗ್ರಿ ಪೂರೈಕೆದಾರರ, ಗ್ರಾಪಂ ಅಧ್ಯಕ್ಷರ ಹಾಗೂ ಅಧಿಕಾರಿಗಳ ಸಹಿ ಇರದೇ ಇರುವುದನ್ನು ಓಂಬಡ್ಸ್‌ಪರ್ಸನ್ ಗಂಭೀರವಾಗಿ ಪರಿಗಣಿಸಿದ್ದಾರೆ.