ಕುಷ್ಟಗಿ ಬಿಸಿಎಂ ಕಚೇರಿಗೆ ಬುಧವಾರ ಭೇಟಿ ನೀಡಿದ್ದ ಡಿಸಿ ಸುರೇಶ ಇಟ್ನಾಳಗೆ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮನವಿ ಸಲ್ಲಿಸಿ ಜಾತಿ ಜನಗಣತಿ ಸಮೀಕ್ಷೆಯಿಂದ ಯಾವ ಕುಟುಂಬ ಹೊರಗುಳಿಯದಂತೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಬಿಸಿಎಂ ಅಧಿಕಾರಿ ಬಸವರಾಜ ನೆಲಗಣಿ, ಸಮೀಕ್ಷೆಯ ನೋಡಲ್ ಅಧಿಕಾರಿ ಮಂಜುನಾಥ ಗುಂಡೂರು, ಮೇಲ್ವಿಚಾರಕ ಎಸ್.ಎಸ್.ತೆಮ್ಮಿನಾಳ ಇತರರು ಇದ್ದರು.  
ಜಿಲ್ಲೆ

ಜಾತಿ ಜನಗಣತಿ ಯಶಸ್ವಿಗೊಳಿಸಿ

ಕುರುವತ್ತಿ ಶ್ರೀಕಾಂತಪ್ಪ

ಕುಷ್ಟಗಿ: ಜಾತಿ ಜನಗಣತಿಗೆ ಸಂಬಂಧಿಸಿದಂತೆ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ಹಿಂದುಳಿದ ವರ್ಗಗಳ ವಿಸ್ತೀರ್ಣಾಧಿಕಾರಿ ಕಚೇರಿಗೆ ಬುಧವಾರ ಭೇಟಿ ನೀಡಿ ಜಾತಿ ಜನಗಣತಿ ಸಮೀಕ್ಷೆಯಲ್ಲಿ ಎದುರಾಗಿರುವ ಸಮಸ್ಯೆ ಆಲಿಸಿ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.

ವಿವಿಧ ಸಮುದಾಯಗಳ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿ-ಗತಿ ತಿಳಿಯಲು ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷೆಗೆ ನಿಯೋಜನೆಗೊಂಡಿರುವ ಸಿಬ್ಬಂದಿ ನಿಯೋಜಿತ ಸ್ಥಳಕ್ಕೆ ತೆರಳಿ ಸಮೀಕ್ಷೆ ಕೈಗೊಂಡು ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು.

ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಜೀರಸಾಬ ಮೂಲಿಮನಿ ಮನವಿ ಸಲ್ಲಿಸಿ, ತಾಂತ್ರಿಕ ಕಾರಣಗಳಿಂದ ಯಾವುದೇ ಕುಟುಂಬ ಸಮೀಕ್ಷೆಯಿಂದ ಹೊರಗುಳಿಯಬಾರದು.

ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಬಹುತೇಕರ ಆಧಾರ್ ಕಾರ್ಡ್‌ಗಳು ಮೊಬೈಲ್ ನಂಬರ್‌ಗೆ ಲಿಂಕ್ ಆಗಿಲ್ಲ. ವಿವಿಧ ಅಂಚೆ ಕಚೇರಿ ಹಾಗೂ ಬ್ಯಾಂಕ್‌ಗಳಲ್ಲಿ ಆಧಾರ್ ನೋಂದಣಿ ಕೇಂದ್ರಗಗಳು ಸ್ಥಗಿತಗೊಂಡಿರುವುದರಿಂದ ಅಂತಹ ಕುಟುಂಬಗಳು ಸಮೀಕ್ಷೆಯಿಂದ ಹೊರಗುಳಿಯುವ ಸಾಧ್ಯತೆ ಇದೆ. ತಾಲೂಕಿನ ವಿವಿಧ ತೋಟದ ಮನೆಗಳಲ್ಲಿ ವಾಸವಿರುವ 6ಸಾವಿರಕ್ಕೂ ಹೆಚ್ಚು ಕುಟುಂಬಗಳು ಸಮೀಕ್ಷೆಯಿಂದ ಹೊರಗುಳಿಯದಂತೆ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚಿಸಬೇಕೆಂದು ಒತ್ತಾಯಿಸಿದರು.

ತಹಸೀಲ್ದಾರ್ ಅಶೋಕ ಶಿಗ್ಗಾವಿ, ಬಿಸಿಎಂ ಅಧಿಕಾರಿ ಬಸವರಾಜ ನೆಲಗಣಿ, ಸಮೀಕ್ಷೆಯ ನೋಡಲ್ ಅಧಿಕಾರಿ ಮಂಜುನಾಥ ಗುಂಡೂರು, ಮೇಲ್ವಿಚಾರಕರಾದ ಎಸ್.ಎಸ್. ತೆಮ್ಮಿನಾಳ, ಯಮನಪ್ಪ ಗುರಿಕಾರ, ಸೋಮಲಿಂಗಪ್ಪ ಗುರಿಕಾರ ಇತರರಿದ್ದರು.