ಕುಷ್ಟಗಿಯ ಕೋರ್ಟ್ ಸಂಕೀರ್ಣದ ಛಾವಣಿಯಲ್ಲಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ಮಂಜುನಾಥ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ್ ಚೌಳಗಿ, ವಕೀಲರ ಸಂಘದ ಅಧ್ಯಕ್ಷ ಎಸ್.ಜಿ. ಪಾಟೀಲ್ ಇತರರಿದ್ದರು.  
ಜಿಲ್ಲೆ

ಪಶು-ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ, ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ಮಂಜುನಾಥ ಮನವಿ

ಕುಷ್ಟಗಿ: ಬೇಸಿಗೆಯಲ್ಲಿ ಪಶು ಪಕ್ಷಿಗಳಿಗೆ ನೀರುಣಿಸುವ ಕಾರ್ಯ ಮಾಡಬೇಕು ಎಂದು ಪಟ್ಟಣದ ಜಿಎಂಎಫ್‌ಸಿ ಕೋರ್ಟ್‌ನ ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ಮಂಜುನಾಥ ಹೇಳಿದರು. ಕೋರ್ಟ್ ಸಂಕೀರ್ಣದ ಛಾವಣಿಯಲ್ಲಿ ಪಕ್ಷಿಗಳಿಗೆ ನೀರು, ಆಹಾರದ ವ್ಯವಸ್ಥೆ ಮಾಡುವ ಮೂಲಕ ನ್ಯಾಯದಾನ ಮಾಡುವ ಕೈಗಳಿಂದ ಪಕ್ಷಿಗಳಿಗೆ ನೀರು, ಕಾಳುಗಳ ದಾನ ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು.

ಬೇಸಿಗೆಯಲ್ಲಿ ಹಳ್ಳ, ಕೊಳ್ಳಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುತ್ತದೆ. ಬಹುತೇಕ ಕಡೆ ಬತ್ತಿ ಹೋಗಿ ಪಕ್ಷಿಗಳು ನೀರು ಅರಸಿ ಬರುತ್ತವೆ. ಹೀಗೆ ಬರುವ ಪಕ್ಷಿಗಳಿಗೆ ಮನೆಯ ಆವರಣ, ಮಾಳಿಗೆ ಮೇಲೆ, ಗಿಡ-ಮರಗಳ ಟೊಂಗೆಗಳಲ್ಲಿ ಪಾತ್ರೆ, ಮಡಕೆ-ಕುಡಿಕೆಗಳನ್ನು ಇಳಿ ಬಿಟ್ಟು ನೀರಿನ ವ್ಯವಸ್ಥೆ ಮಾಡಬೇಕು. ಜಾನುವಾರುಗಳಿಗೂ ನೀರಿನ ಜತೆ ಮೇವಿನ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.

ಕಲಬುರಗಿ ಹೈಕೋರ್ಟ್‌ನ ವಕೀಲ ಎಸ್.ಜಿ. ಮಠದ್, ಮಣ್ಣಿನ ಕುಡಿಕೆಗಳನ್ನು ನೀಡಿದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ್ ಚೌಳಗಿ, ವಕೀಲರ ಸಂಘದ ಅಧ್ಯಕ್ಷ ಎಸ್.ಜಿ. ಪಾಟೀಲ್, ಹಿರಿಯ ವಕೀಲರಾದ ಫಕೀರಪ್ಪ ಚಳಗೇರಿ, ಆರ್.ವಿ. ಮಾಲಿಪಾಟೀಲ್, ವಿ.ಕೆ. ಕುಷ್ಟಗಿ, ಗೋಪಾಲ್‌ರಾವ್, ಸಿ.ಎನ್. ಉಪ್ಪಿನ, ಎಚ್.ಆರ್. ನಾಯಕ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು, ಕೋರ್ಟ್ ಸಿಬ್ಬಂದಿ ಇದ್ದರು.