ಜಿಲ್ಲೆ

ಶಿಕ್ಷಣ ಸಂಸ್ಥೆಗಳ ಉದ್ದೇಶ ಸ್ಪಷ್ಟವಾಗಿರಲಿ,  ಡಿಡಿಪಿಐ ಕೆಳದಿಮಠ ಅಭಿಮತ,  ಅನುದಾನ ರಹಿತ ಶಾಲೆಗಳ ಸಮ್ಮೇಳನ ಉದ್ಘಾಟನೆ

Dharwada - Basavaraj Idli

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಅನುದಾನ ರಹಿತ ಶಾಲೆಗಳು ವಿಭಿನ್ನ ಹಾಗೂ ಪರಿಣಾಮಕಾರಿಯಾಗಿ ಶಿಕ್ಷಣ ನೀಡುವ ಮೂಲಕ ಎಸ್ಎಸ್ಎಲ್ಸಿ ಫಲಿತಾಂಶ ಉತ್ತಮವಾಗುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಆದರೆ, ಶಿಕ್ಷಣ ಎನ್ನುವುದು ವ್ಯಾಪಾರೀಕರಣವಾಗದೇ ಶಾಲೆ ಆರಂಭ ಮಾಡುವ ಉದ್ದೇಶದ ಸ್ಪಷ್ಟ ಕಲ್ಪನೆ ಇರಬೇಕು ಎಂದು ಡಿಡಿಪಿಐ ಎಸ್.ಎಸ್. ಕೆಳದಿಮಠ ಸೂಚಿಸಿದರು.

ಕರ್ನಾಟಕ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿ (ಕುಸ್ಮಾ) ವತಿಯಿಂದ ಮಹಾಮಂಡಳಿಯ ಸಂಸ್ಥಾಪನಾ ಅಧ್ಯಕ್ಷ ದಿ. ಜಿ.ಎಸ್. ಶರ್ಮಾ ಜನ್ಮಶತಾಬ್ದಿ ವರ್ಷಾಚರಣೆ ನಿಮಿತ್ತ ನಗರದ ಖಾಸಗಿ ಹೋಟೆಲ್ ನಲ್ಲಿ ಶನಿವಾರ ಏರ್ಪಡಿಸಿದ್ದ ಶೈಕ್ಷಣಿಕ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದ ನಿಯಮಾವಳಿ ಪ್ರಕಾರ ಖಾಸಗಿ ಶಾಲೆಗಳಿಗೆ ಅನುಮತಿ ನೀಡಲಾಗುತ್ತದೆ. ಮಕ್ಕಳಿಗೆ ಮೂಲಸೌಲಭ್ಯಗಳು ಅತ್ಯಗತ್ಯ, ಯಾರು ಕಟ್ಟು ನಿಟ್ಟಿನ ನಿಯಮ ಪಾಲನೆ ಮಾಡುತ್ತಾರೆಯೋ ಅವರಿಗೆ ಅನುಮತಿ ನೀಡಲಾಗುತ್ತದೆ. ನಗರ ಪ್ರದೇಶದಲ್ಲಿ ಕನಿಷ್ಠ 10 ಗುಂಟೆ, ಗ್ರಾಮೀಣ ಪ್ರದೇಶದಲ್ಲಿ 20 ಗುಂಟೆ ಜಾಗ ಇರಬೇಕು, ಮೂಲ ಸೌಲಭ್ಯಗಳಿರಬೇಕು, ಕಟ್ಟಡವು ಬೆಂಕಿ, ಸುರಕ್ಷತೆಯ ನಿಯಮ ಪಾಲನೆ ಮಾಡಿರಬೇಕು ಎಂದು ಹೇಳಿದರು.

ಅನುದಾನರಹಿತ ಶಾಲೆಗಳು ಕಡ್ಡಾಯವಾಗಿ ದಾಖಲಾತಿಗಳನ್ನು ನಿರ್ವಹಣೆ ಮಾಡಬೇಕು, ಇಂದಿನ ಮಕ್ಕಳಿಗೆ ಸಂಸ್ಕೃತಿ, ಪರಂಪರೆ ಬಗ್ಗೆ ತಿಳಿವಳಿಕೆ ನೀಡುವ ಜತೆಗೆ ನೈತಿಕ ಶಿಕ್ಷಣಕ್ಕೂ ಸ್ಥಾನ ಕೊಡಬೇಕು ಎಂದು ಸಲಹೆ ನೀಡಿದರು.

ಅನುದಾನ ರಹಿತ ಶಾಲೆಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಏನೇ ತೊಂದರೆ ಇದ್ದರೂ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಬಗೆ ಹರಿಸಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ದಿಸೆಯಲ್ಲಿ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿ ಅಧ್ಯಕ್ಷ ಸತ್ಯಮೂರ್ತಿ ಮಾತನಾಡಿ, 1983ರಲ್ಲಿ ಆರಂಭವಾದ ಕುಸ್ಮಾ ಸುರತ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶ ಹೊಂದಿದೆ. ಕೆಲ ವ್ಯಾಪಾರಿ ಮನೋಭಾವದವರು ಈ ಕ್ಷೇತ್ರಕ್ಕೆ ಕಾಲಿಟ್ಟಿರುವುದರಿಂದ ಕೆಲವೆಡೆ ಸಮಸ್ಯೆಯಾಗಿರಬಹುದು. ಸಂಘಟನೆಯು ಯಾರ ವಿರುದ್ಧವೂ ಅಲ್ಲ, ಎಲ್ಲದರ ಮಧ್ಯೆ ಉತ್ತಮ ಶಿಕ್ಷಣದ ಗುರಿಯನ್ನು ಸಂಟನೆ ಕೈಬಿಟ್ಟಿಲ್ಲ. ಮಕ್ಕಳು ಹಾಗೂ ಸೊಸೈಟಿಗೆ ಏನು ಬೇಕಾಗಿದೆ ಎಂಬುದನ್ನು ಅರ್ಥೈಸಿಕೊಂಡು ಶಿಕ್ಷಣದಲ್ಲಿ ಬದಲಾವಣೆ ತರುತ್ತ ಮುನ್ನಡೆದಿದ್ದೇವೆ ಎಂದರು.

ಕೆಲವು ಶಾಲೆಗಳಲ್ಲಿ ಲಿತಾಂಶಕ್ಕಾಗಿ ಬಹಳಷ್ಟು ಕಿರಿಕಿರಿ ಮಾಡಲಾಗುತ್ತದೆ. ಮಕ್ಕಳಿಗೆ ಶಿಕ್ಷೆ ನೀಡಲಾಗುತ್ತದೆ. ಇದೇ ಕಾರಣಕ್ಕೆ ರಾಜ್ಯದಲ್ಲಿ 1.40 ಲಕ್ಷ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಅಂದಾಜಿದೆ. ಅತ್ಯಂತ ಕಷ್ಟಕರ ಸ್ಥಿತಿ ಇದೆ. ಇದನ್ನು ಸರಿ ಪಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದಕ್ಕಾಗಿ ಎಲ್ಲರೂ ಒಗ್ಗಟ್ಟಾಗಬೇಕು ಎಂದು ಹೇಳಿದರು.

ಉಪಾಧ್ಯಕ್ಷ ವಿಜಯ ಶೆಟ್ಟಿ, ವಿಶ್ವನಾಥ ರಾನಡೆ, ಸುರೇಶ ಭಟ್ಟ, ವಿಜಯಕುಮಾರ, ಆದಿಲ್ ಪಾಶಾ, ಉಮಾವತಿ, ದೀಪಕ್, ಮಹೇಂದ್ರ ಸಿಂಘಿ, ಧಾರವಾಡ ಜಿಲ್ಲೆಯ ಅನುದಾನ ರಹಿತ ಶಾಲೆ ಆಡಳಿತ ಮಂಡಳಿಗಳ ಪದಾಧಿಕಾರಿಗಳು, ಚಿಂತಕರು, ಶಾಲೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

ಕುಸ್ಮಾ ಕಾರ್ಯದರ್ಶಿ ಮರಿಯಪ್ಪ ಪರಿಚಯಿಸಿದರು. ಮೂಕಾಂಬಿಕಾ ಭಟ್ ಪ್ರಾರ್ಥನೆ ಹಾಡಿದರು.