ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕೂಲಿ ಕಾರ್ಮಿಕ ಮಹಿಳೆಯರ ಪುಟ್ಟ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆ ಪಾಲನೆಗಾಗಿ ಸರ್ಕಾರ ಆರಂಭಿಸಿರುವ ಕೂಸಿನ ಮನೆ ಹೆಸರಿನ ಶಿಶುಪಾಲನಾ ಕೇಂದ್ರಗಳಿಗೆ ಮತ್ತಷ್ಟು ಶಕ್ತಿ ತುಂಬುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ಕೂಸಿನ ಮನೆಗಳಿಗೆ ಮೇಲ್ವಿಚಾರಣ ಸಮಿತಿ ರಚಿಸಲಾಗುತ್ತಿದೆ. ಇದೊಂದು ರೀತಿಯಲ್ಲಿ ಸರ್ಕಾರದ ಯೋಜನೆಗೆ ಕಣ್ಗಾವಲಿನಂತೆ ಕಾರ್ಯನಿರ್ವಹಿಸಲಿದೆ.
ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಸಾಕಷ್ಟು ಪರಿಣಾಮಕಾರಿಯಾಗಿರುವ ಬೆನ್ನಲ್ಲೆ ಅಂಥ ಮಹಿಳೆಯ ಸಣ್ಣ ಮಕ್ಕಳ ಲಾಲನೆ ಪಾಲನೆಗಾಗಿ ರಾಜ್ಯಾದ್ಯಂತ ಕೂಸಿನ ಮನೆಗಳು ಕಾರ್ಯಾರಂಭ ಮಾಡಿದ್ದು ಗ್ರಾಮಾಂತರ ಜಿಲ್ಲಾದ್ಯಂತ ಸುಮಾರು 78 ಕೂಸಿನ ಮನೆಗಳನ್ನು ಆರಂಭಿಸಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅರಂಭವಾಗಿರುವ ಈ ಕೇಂದ್ರಗಳನ್ನು ಮತ್ತಷ್ಟು ಪರಿಣಾಮಕಾರಿಯನ್ನಾಗಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ಕಾರ್ಯಕಾರಿ ಸಮಿತಿ, ಗ್ರಾಮ ಪಂಚಾಯತಿ ಮಟ್ಟದಲ್ಲಿ ಮೇಲ್ವಿಚಾರಣೆ ಸಮಿತಿಗಳು ರಚನೆಯಾಗಲಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಮಿತಿ ಕಾರ್ಯಾರಂಭ ಮಾಡಲಿದೆ.
ಗ್ರಾಪಂ ನಿರ್ವಹಣೆ: ಕೂಸಿನ ಮನೆಯ ಲಾಭವನ್ನು ಎಲ್ಲೆಡೆ ಪರಿಣಾಮಕಾರಿಯಾಗಿ ಸದ್ಘಳಕೆ ಮಾಡುವಂತೆ ಮಾಡುವುದು, ಮತ್ತಷ್ಟು ಪ್ರಚಾರ ಮಾಡುವುದು ಸೇರಿ ನರೇಗಾ ಯೋಜನೆ ಅಡಿ ಕೆಲಸ ನಿರ್ವಹಿಸುವ ಮಹಿಳೆಯರೂ ಸೇರಿ ಇತರ ಕೆಲಸಗಳಿಗೆ ತೆರಳುವ ಮಹಿಳೆಯರು ಆಸಕ್ತಿ ಇದ್ದಲ್ಲಿ ಮಕ್ಕಳನ್ನು ಕೂಸಿನ ಮನೆಗೆ ದಾಖಲಿಸಲು ಅವಕಾಶ ಮಾಡಿಕೊಡುವುದು, ಅದೇ ರೀತಿ ಶಿಶುಪಾಲನಾ ಕೇಂದ್ರಕ್ಕೆ ದಾಖಲಾಗುವ ಮಕ್ಕಳಿಗೆ ಗ್ರಾಮ ಪಂಚಾಯಿತಿ ಸ್ವಂತ ಸಂಪನ್ಮೂಲದಿಂದ ಪೌಷ್ಟಿಕ ಆಹಾರ ವಿತರಿಸುವುದು ಇದರಲ್ಲಿನ ಪ್ರಮುಖ ಅಂಶಗಳಾಗಿವೆ.
ಮೇಲ್ವಿಚಾರಣ ಸಮಿತಿ ಸದಸ್ಯರಿರುತ್ತಾರೆ: ಗ್ರಾಮ ಪಂಚಾಯತಿ ಮಟ್ಟದಲ್ಲಿನ ಈ ಸಮಿತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರೇ ಇದಕ್ಕೂ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಹೊರಲಿದ್ದು, ಕೂಸಿನ ಮನೆಗೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರು, ಮೇಲ್ವಿಚಾರಕಿ, ಆರೋಗ್ಯ ಸುರಕ್ಷಾಧಿಕಾರಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಗ್ರಾಮಮಟ್ಟದ ಮಹಿಳಾ ಒಕ್ಕೂಟದ ಅಧ್ಯಕ್ಷರು ಹಾಗೂ ಇದರ ಲಾನುಭವಿಗಳು ತಾಯಂದಿರು ಸದಸ್ಯರಾಗಿರುತ್ತಾರೆ. ಗ್ರಾಮ ಪಂಚಾಯಿತಿ ಪಿಡಿಒ ಇದರ ಸದಸ್ಯ ಕಾರ್ಯದರ್ಶಿಯಾಗಲಿದ್ದಾರೆ.
ಏನೇನು ಕರ್ತವ್ಯ:ಶಿಶುಪಾಲನ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು. ಮಕ್ಕಳ ಪಾಲನೆ ನೋಡಿಕೊಳ್ಳುವವರಿಗೆ ಸೂಕ್ತ ತರಬೇತಿ ನೀಡುವುದು. ಮಕ್ಕಳಿಗೆ ನೀಡಬೇಕಾದ ಪೌಷ್ಟಿಕ ಅಹಾರದ ಉಸ್ತುವಾರಿ ನೋಡಿಕೊಳ್ಳಬೇಕು ಹಾಗೆಯೇ ಪ್ರತಿ ತಿಂಗಳು ಸಮಿತಿ ಸಭೆ ನಡೆಸಿ ಕೇಂದ್ರದ ಕಾರ್ಯವೈಖರಿ ಬಗ್ಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳುವುದು ಸಮಿತಿಯ ಪ್ರಮುಖ ಕರ್ತವ್ಯವಾಗಲಿದೆ. ಜಿಲ್ಲೆಯಾದ್ಯಂತ ಕೂಸಿನ ಮನೆ ಹೆಸರಿನಲ್ಲಿ ಪ್ರಾರಂಭವಾಗಿರುವ ಶಿಶುಪಾಲನ ಕೇಂದ್ರಗಳ ಮೇಲೆ ನಿಗಾ ವಹಿಸಲು ಮೇಲ್ವಿಚಾರಣ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಹೊಸದಾಗಿ ಶಿಶು ಪಾಲನಾ ಕೇಂದ್ರಗಳ ಅನುಷ್ಠಾನ ಉಸ್ತುವಾರಿ ಮತ್ತು ಸಮರ್ಪಕ ಕಾರ್ಯ ನಿರ್ವಹಣೆಗಾಗಿ ಜಿಲ್ಲೆ ಮತ್ತು ತಾಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟಗಳಲ್ಲಿ ಮೇಲ್ವಿಚಾರಣೆ ಸಮಿತಿಗಳು ರಚನೆಯಾಗಿವೆ.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಉದ್ಯೋಗ ಕಾರ್ಡ್ ಹೊಂದಿರುವ ಕುಟುಂಬದ ಮಕ್ಕಳಿಗೆ ಕೂಸಿನ ಮನೆ ಹೆಸರಿನಲ್ಲಿ ಶಿಶುಪಾಲನಾ ಕೇಂದ್ರಗಳನ್ನು ಆರಂಭಿಸಲಾಗಿದೆ.
ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಪ್ರಮುಖವಾದ ಕೂಸಿನ ಮನೆ ಕಾರ್ಯಕ್ರಮವನ್ನು ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಎಲ್ಲ ಕ್ರಮಕೈಗೊಳ್ಳಲಾಗಿದೆ. ಮಹಿಳೆಯರಿಗೆ ಈ ಯೋಜನೆಯಿಂದ ಸಾಕಷ್ಟು ಅನುಕೂಲವಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಗಿದೆ. ಪೌಷ್ಟಿಕ ಆಹಾರ, ಭದ್ರತೆ, ಸುರಕ್ಷತೆ ಹಾಗೂ ಸಮರ್ಪಕ ಮೂಲಸೌಕರ್ಯ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ.
ಡಾ.ಕೆ.ಎನ್.ಅನುರಾಧಾ, ಜಿಪಂ ಸಿಇಒ
ಉದ್ಯೋಗ ಖಾತ್ರಿ ಯೋಜನೆಯಡಿ ಅನೇಕ ಮಹಿಳೆಯರು ಕೆಲಸ ಮಾಡುತ್ತಾರೆ, ಅವರ ಮಕ್ಕಳನ್ನು ಪಾಲನೆ ಮಾಡುವ ಸಲುವಾಗಿ ಕೂಸಿನ ಮನೆ ಯೋಜನೆ ಅನುಷ್ಟಾನಕ್ಕೆ ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೂಸಿನ ಮನೆ ಮೇಲ್ವಿಚಾರಣೆಗೆ ಸಮಿತಿಗಳ ರಚನೆ ಸಂಬಂಧ ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಟಿ.ಕೆ.ರಮೇಶ್, ಜಿಪಂ ಉಪಕಾರ್ಯದರ್ಶಿ