ಜಿಲ್ಲೆ

ಕವಿಗಳು ಸಮಾಜಮುಖಿಯಾಗಿರಲಿ


*ಸಾಹಿತಿ ಅಲ್ಲಾಗಿರಿರಾಜ ಸಲಹೆ ಪ್ರೀತಿಯ ಜಾತ್ರಿ ಕವನ ಸಂಕಲನ ಬಿಡುಗಡೆ

ಕುಷ್ಟಗಿ: ಕವಿತೆಗಳು ಜನಪರವಾಗಿರಬೇಕು. ಕವಿಗಳು ಜಾತಿ, ಧರ್ಮಕ್ಕೆ ಸೀಮಿತರಾಗದೆ ಸಮಾಜಮುಖಿಯಾಗಿರಬೇಕು ಎಂದು ಗಜಲ್ ಸಾಹಿತಿ ಅಲ್ಲಾಗಿರಿರಾಜ ಹೇಳಿದರು.

ಪಟ್ಟಣದ ಬಸವ ಭವನದಲ್ಲಿ ಶನಿವಾರ ಸಾಹಿತಿ ಮೌನೇಶ ಬಡಿಗೇರರ ಪ್ರೀತಿಯ ಜಾತ್ರಿ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು. ದೇಶಾಭಿಮಾನದ ಕಾವ್ಯ ರಚನೆಯಾಗಬೇಕಿದೆ. ಕವಿಗಳು ಓದುಗರನ್ನು ಸೃಷ್ಟಿ ಮಾಡಬೇಕು. ಸಾಹಿತ್ಯ ರಚನೆ ಪ್ರಸವ ವೇದನೆಯಾದರೂ ಕೃತಿ ಬಿಡುಗಡೆ ತೊಟ್ಟಿಲೋತ್ಸವದ ಸಂಭ್ರಮದಂತಿರುತ್ತದೆ. ಕೃತಿ ಬಿಡುಗಡೆ ಮಾಡಲು ಖರ್ಚು ಮಾಡುವ ಸಾಹಿತಿಗಳು ಸಾಲಗಾರರಾಗುತ್ತಿದ್ದಾರೆ. ಕೃತಿಗಳನ್ನು ಕೊಂಡು ಓದುವ ಮೂಲಕ ಸಾಹಿತಿಗಳಿಗೆ ನೆರವಾಗಬೇಕಿದೆ ಎಂದರು.

ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಮಾತನಾಡಿ, ಜನರ ಹೃದಯ ತಟ್ಟುವ ಸಾಹಿತ್ಯ ರಚನೆಯಾಗಬೇಕಿದೆ. ಸಾಹಿತಿಗಳು ಸಾಹಿತ್ಯದ ಮೂಲಕ ಸಮಾಜ ತಿದ್ದುವ ಕಾರ್ಯ ಮಾಡಬೇಕಿದೆ ಎಂದರು. ಸಾಹಿತಿ ಪ್ರಮೋದ ತುರ್ವಿಹಾಳ ಮಾತನಾಡಿ, ಕವಿಗಳು ಅಧ್ಯಯನಶೀಲರಾಗಬೇಕು. ಉದಯೋನ್ಮುಖ ಸಾಹಿತಿಗಳು ಪ್ರಚಲಿತ ವಿದ್ಯಮಾನ ಹಾಗೂ ಆಳುವ ವರ್ಗವನ್ನು ಎಚ್ಚರಿಸುವ ಕಾರ್ಯ ಮಾಡಬೇಕಿದೆ ಎಂದರು.

ಕತೆಗಾರ ಟಿ.ಎಸ್.ಗೊರವರ, ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ್, ಜಿಪಂ ಮಾಜಿ ಸದಸ್ಯ ಕೆ.ಮಹೇಶ, ಸಾಹಿತಿಗಳಾದ ಮಳಿಯಪ್ಪ ಪತ್ತಾರ, ಶೇಖರಗೌಡ ಸರನಾಡಗೌಡರ್, ಅಮೀನ್ ಅತ್ತಾರ, ಡಾ.ಕೆ.ಶರಣಪ್ಪ, ಶಿಕ್ಷಕರಾದ ನಟರಾಜ ಸೋನಾರ್, ಜೀವನಸಾಬ್ ಬಿನ್ನಾಳ ಇತರರು ಇದ್ದರು.