ಕುಷ್ಟಗಿಯ ರೇಣುಕಾಚಾರ್ಯ ಮಂಗಲಭವನದಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಮಟ್ಟದ ಶೈಕ್ಷಣಿಕ ಕಾರ್ಯಾಗಾರವನ್ನು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ಉದ್ಘಾಟಿಸಿದರು. 
ಜಿಲ್ಲೆ

ಶಿಕ್ಷಕರ ವರ್ಗಾವಣೆಗೆ ಬೇಕಿದೆ ಪರ್ಯಾಯ ಮಾರ್ಗ -ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಹೇಳಿಕೆ

ಕುಷ್ಟಗಿ: ಶಿಕ್ಷಕರ ವರ್ಗಾವಣೆಗೆ ಸರ್ಕಾರ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ಹೇಳಿದರು.

ಪಟ್ಟಣದ ರೇಣುಕಾಚಾರ್ಯ ಮಂಗಲಭವನದಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ರಾಜ್ಯದ 1.63 ಲಕ್ಷ ಶಿಕ್ಷಕರಲ್ಲಿ 75 ಸಾವಿರ ಶಿಕ್ಷಕರು ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. ಶಿಕ್ಷಕರಲ್ಲಿಯೇ ಕೆಲವರು ಕೆಇಟಿಗೆ ಅರ್ಜಿ ಸಲ್ಲಿಸಿದ್ದಕ್ಕೆ ತಡೆಯಾಗಿದೆ. ಇದರಿಂದ ಶಿಕ್ಷಕರು ತೊಂದರೆ ಎದುರಿಸುತ್ತಿದ್ದಾರೆ ಎಂದರು.

ಕೆಇಟಿಗೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತೆರವುಗೊಳಿಸಿ ವರ್ಗಾವಣೆ ಪ್ರಕ್ರಿಯೆ ಆರಂಭಿಸಬೇಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಸಂಘ ಒತ್ತಾಯಿಸುತ್ತಿದೆ. ವೃಂದ ಮತ್ತು ನೇಮಕಾತಿಯಲ್ಲಿನ ಬದಲಾವಣೆಯಿಂದ ತೊಂದರೆಯಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ. ಈ ಸಂಬಂಧ ತಕರಾರು ಸಲ್ಲಿಸಲು ಸಂಘದ ವಿವಿಧ ಘಟಕಗಳು ತೊಡಗಿಕೊಂಡಿವೆ.

ಸಂಘದಲ್ಲಿರುವ ಚುನಾಯಿತ ಪ್ರತಿನಿಧಿಗಳೂ ಸಹ ಶಿಕ್ಷಕರೆಂಬುದನ್ನು ಮರೆಯಬಾರದು. ಬೆಳಗಿನ ಅವಧಿಯಲ್ಲಾದರೂ ಮಕ್ಕಳಿಗೆ ಪಾಠ ಮಾಡಬೇಕು. ತಿಂಗಳಿಗೆ ಒಂದು ಶಾಲೆ ಆಯ್ಕೆ ಮಾಡಿಕೊಂಡು ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಸಂಘಟನೆಯ ಜತೆಗೆ ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಸಂಘದ ಸಹ ಕಾರ್ಯದರ್ಶಿಗಳಾದ ಬಸವರಾಜ, ಪೂರ್ಣಿಮಾ ತುಪ್ಪದ್, ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣವರ್, ತಾಲೂಕು ಅಧ್ಯಕ್ಷ ಶ್ರೀನಿವಾಸ ನಾಯಕ, ಶಿಕ್ಷಕ ಸಂಘದ ತಾಲೂಕು ಅಧ್ಯಕ್ಷ ಲಕ್ಷ್ಮಣ ಪೂಜಾರ, ಕಾರ್ಯದರ್ಶಿ ಕಳಕಮಲ್ಲೇಶ ಭೋಗಿ, ನಿರ್ದೇಶಕಿ ಗುರುಪಾದಮ್ಮ ಭಂಡಾರಿ, ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಲಕ್ಕಲಕಟ್ಟಿ, ಕನಕಗಿರಿ ತಾಲೂಕು ಅಧ್ಯಕ್ಷೆ ಶಮ್‌ಶಾದ್ ಬೇಗಂ, ಕುಕನೂರು ತಾಲೂಕು ಅಧ್ಯಕ್ಷ ಮಾರುತಿ ತಳವಾರ್ ಇತರರು ಇದ್ದರು.