ಕುಷ್ಟಗಿ: ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ಮಧ್ಯಾಹ್ನ ಜಿಪಂ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ತಾಪಂ ಸಾಮಾನ್ಯ ಸಭೆ ನಡೆಯಿತು.
ಶಿಶು ಅಭಿವೃದ್ಧಿ ಯೋಜನಾಧೀಕಾರಿ(ಸಿಡಿಪಿಒ)ಯಲ್ಲಮ್ಮ ಮಾತನಾಡಿ, ತಾಲೂಕಿನಲ್ಲಿ 68ಅಂಗನವಾಡಿ ಕೇಂದ್ರಗಳನ್ನು ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಮುದುಟಗಿ, ಚಂದ್ರಗಿರಿ, ಮಾಲಗಿತ್ತಿ, ಗುಡದೂರುಕಲ್, ಹನುಮಸಾಗರ ಹಾಗೂ ಗಡಚಿಂತಿ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿರುವ ನೂತನ ಕಟ್ಟಡ ಕಾಮಗಾರಿ ಬಿಲ್ ಆಗಿಲ್ಲ ಎಂಬ ಕಾರಣಕ್ಕೆ ಇಲಾಖೆಗೆ ಹಸ್ತಾಂತರಿಸಿಲ್ಲ. ಕಬ್ಬರಗಿ, ಜೂಲಕುಂಟಿ, ಬಿಳೇಕಲ್ ಸೇರಿ 8ಗ್ರಾಮಗಳಲ್ಲಿ ಕಟ್ಟಡ ನಿರ್ಮಿಸಲು ನಿವೇಶನ ಲಭ್ಯವಾಗಿಲ್ಲ. ಶಾಖಾಪುರ ಗ್ರಾಮದ ಕೇಂದ್ರವನ್ನು ಸಮುದಾಯ ಭವನದಲ್ಲಿ ನಡೆಸಲಾಗುತ್ತಿದೆ. ಅದಕ್ಕೂ ಬಾಡಿಗೆ ನೀಡುವಂತೆ ಗ್ರಾಮಸ್ಥರು ಇತ್ತೀಚೆಗೆ ಗಲಾಟೆ ನಡೆಸಿದರು ಎಂದರು.
ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಮುಂಗಾರು ಹಂಗಾಮಿನಲ್ಲಿ ತೊಗರಿ, ಮೆಕ್ಕೆಜೋಳ, ಸಜ್ಜೆ, ನವಣೆ ಹಾಗೂ ಹತ್ತಿ ಬಿತ್ತನೆಯಾಗಿದೆ. ಅತಿಯಾದ ಮಳೆಯಿಂದ ಹೆಸರು ಬೆಳೆ ಹಾಳಾಗಿದೆ. ಯೂರಿಯಾ ಹೊರತುಪಡಿಸಿ ಬೇರೆ ರಸಗೊಬ್ಬರ ದಾಸ್ತಾನು ಇದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ಕಾತರಕಿ ತಿಳಿಸಿದರು.
ತಾಲೂಕಿನಲ್ಲಿ ಶಿಥಿಲಗೊಂಡ ಹಾಗೂ ದುರಸ್ತಿಯಲ್ಲಿರುವ ಶಾಲಾ ಕೊಠಡಿಗಳ ಮಾಹಿತಿ ಹಾಗೂ ಒಟ್ಟು 224ಕೊಠಡಿಗಳ ಅಗತ್ಯವಿರುವ ಬಗ್ಗೆ ಪ್ರಭಾರ ಬಿಇಒ ಎಂ.ಜಗದೀಶಪ್ಪ ತಿಳಿಸಿದರು. ಮೇಲ್ಛಾವಣಿ ಸೇರಿ ಸಣ್ಣ ಪುಟ್ಟ ದುರಸ್ತಿ ಇರುವ ಕೊಠಡಿಗಳ ಮಾಹಿತಿ ಹಾಗೂ ಅಂತಹ ಕೊಠಡಿಗಳ ದುರಸ್ತಿ ಕಾರ್ಯ ಜಿಪಂ ಹಾಗೂ ತಾಪಂ ಅನುದಾನದಡಿ ಕೈಗೊಳ್ಳಲಾಗುವದು ಎಂದು ತಾಪಂ ಇಒ ಪಂಪಾಪತಿ ಹಿರೇಮಠ ಹೇಳಿದರು.
ತಾಲೂಕಿನ ವಿವಿಧ ಪಶು ಚಿಕಿತ್ಸಾಲಾಯಗಳಲ್ಲಿ ಪಶು ವೈದ್ಯರ 11ಹುದ್ದೆ ಖಾಲಿ ಇವೆ. ಜಾನುವಾರುಗಳಲ್ಲಿ ಮಳೆಗಾಲ ಹಾಗೂ ನಂತರದ ದಿನಗಳಲ್ಲಿ ಚರ್ಮಗಂಟು ರೋಗ ಹೆಚ್ಚಾಗಿ ಕಂಡುಬರುವುದರಿಂದ ಇಲಾಖೆ ಸೂಚನೆ ಪಾಲಿಸಿ ರೋಗ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪಶು ಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಆನಂದ ದೇವರನಾವದಗಿ ತಿಳಿಸಿದರು. ರೈತ ಸಂಘದವರಿಂದ ತಮ್ಮ ಇಲಾಖೆ ವಿರುದ್ಧ ದೂರುಗಳು ಬರುತ್ತಿದ್ದು, ರೈತರನ್ನು ವಿಶ್ವಾಸಕ್ಕೆ ತಗೆದುಕೊಂಡು ಕೆಲಸ ಮಾಡಿ ಎಂದು ಜಿಪಂ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಅಧಿಕಾರಿಗೆ ಸೂಚಿಸಿದರು.
ವಿವಿಧ ಇಲಾಖೆ ಅಧಿಕಾರಿಗಳು ವಿವಿಧ ಯೋಜನೆ ಹಾಗೂ ತಾಲೂಕಿನಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಸ್ಪಷ್ಟ ಮಾಹಿತಿ ಸಭೆಗೆ ನೀಡಬೇಕು. ಸಿದ್ಧಪಡಿಸಿದ ವರದಿ ಓದಿ ಹೇಳುವುದು ಬೇಡ ಎಂದು ಜಿಪಂ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಅಧಿಕಾರಿಗಳಿಗೆ ತಿಳಿಸಿದರು. ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳು ಕೆಲವೇ ರೈತರಿಗೆ ಯೋಜನೆಗಳ ಮಾಹಿತಿ ನೀಡಿ, ಎಲ್ಲ ಯೋಜನೆಗಳ ಲಾಭ ಪಡೆಯುವಂತೆ ಮಾಡುತ್ತಿದ್ದಾರೆ.
ಯೋಜನೆಗಳ ವ್ಯಾಪಕ ಪ್ರಚಾರ ಕೈಗೊಂಡು ಅರ್ಹ ಎಲ್ಲರಿಗೂ ಯೋಜನೆ ಲಾಭ ಸಿಗುವಂತೆ ಮಾಡಬೇಕು ಎಂದು ತಾಕೀತು ಮಾಡಿದರು. ಜೆಜೆಎಂ ಕಾಮಗಾರಿ ಹಾಗೂ ಕುಡಿವ ನೀರಿನ ಶುದ್ಧೀಕರಣ ಘಟಕಗಳಿಗೆ ಸಂಬಂಧಿಸಿದಂತೆ ಗ್ರಾಮವಾರು ಮಾಹಿತಿ ತಯಾರಿಸಿ ನೀಡುವಂತೆ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸುರೇಶಗೆ ಸೂಚಿಸಿದರು.