ಕುಷ್ಟಗಿ: ನೆರಬೆಂಚಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ವಿದ್ಯಾ ಕಂಪಾಪುರಮಠ, ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಂದಕೂರು ಗ್ರಾಮದಲ್ಲಿ ವೃತ್ತಿ ಜೀವನ (1997)ಆರಂಭಿಸಿ, ಹಲವು ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಶಾಲೆಗೆ ಬರಲು ಆಗದ ಅಂಗವಿಕಲ, ಬುದ್ಧಿಮಾಂದ್ಯ ಮಕ್ಕಳ ಮನೆಗೆ ತೆರಳಿ ಪಾಠ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಇದರಿಂದ ಮಕ್ಕಳು ಹಾಗೂ ಪಾಲಕರ ಪ್ರೀತಿಗೂ ಪಾತ್ರರಾಗಿದ್ದಾರೆ. ಸದ್ಯ ನಲಿಕಲಿ ವಿಭಾಗದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿರುವ ವಿದ್ಯಾ, ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದಾರೆ. ಅಲ್ಲದೆ ಹದಿಹರೆಯದ ಮಕ್ಕಳಿಗೆ ಜೀವನ ಕೌಶಲ, ಕಿಶೋರಿಯರಿಗೆ ತರಬೇತಿ, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಸೇರಿಸುವ ಕುರಿತು ಶಾಲಾ ಮಕ್ಕಳು ಹಾಗೂ ಶಿಕ್ಷಕರಿಗೆ ನೀಡುವ ತರಬೇತಿ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೊಡುಗೆ ನೀಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಮಹಿಳಾ ಪ್ರತಿನಿಧಿಯಾಗಿರುವ ಇವರು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿ ನಿರ್ದೇಶಕರಾಗಿಯೂ ತೊಡಗಿಸಿಕೊಂಡಿದ್ದಾರೆ. ಇವರ ಸೇವೆ ಗುರುತಿಸಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ, ವಚನ ವಿಜಯೋತ್ಸವ ಬಸವ ಜ್ಯೋತಿ ಪ್ರಶಸ್ತಿ, ಬಸವ ವಿಭೂಷಣ ರಾಜ್ಯ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿಗಳು ಸಂದಿವೆ.
ಮಕ್ಕಳಿಗೆ ಶಿಕ್ಷಣದಲ್ಲಿ ಯಾವುದೇ ಕೊರತೆ ಆಗಬಾರದು ಎಂಬುದು ನನ್ನ ಆಶಯ. ಶಿಕ್ಷಕರು ಕ್ರಿಯಾಶೀಲರಾಗಿದ್ದರೆ ಮಕ್ಕಳೂ ಹಾಗೇ ಆಗುತ್ತಾರೆ. ಈ ನಿಟ್ಟಿನಲ್ಲಿ ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ. ರಾಜ್ಯ ಪ್ರಶಸ್ತಿ ಲಭಿಸಿರುವುದು ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ.
| ವಿದ್ಯಾ ಕಂಪಾಪುರಮಠ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರು, ನೆರಬೆಂಚಿ