ಕುಷ್ಟಗಿಯ ಅಡವಿ ಮುಖ್ಯ ಪ್ರಾಣೇಶ ದೇವಸ್ಥಾನದಲ್ಲಿ ಆಯೋಜಿಸಲಾಗಿರುವ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವವನ್ನು ಉಡುಪಿಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಶುಕ್ರವಾರ ಸಂಜೆ ಉದ್ಘಾಟಿಸಿದರು. ಶ್ರೀ ವಿದ್ಯಾರಾಜೇಶ್ವರ ತೀರ್ಥರು, ವಿದ್ವಾನ್ ಕೆ.ಅಪ್ಪಣ್ಣಾಚಾರ್ಯ, ಅರ್ಚಕ ಪರಿಮಳಾಚಾರ್ಯ, ದೇವಸ್ಥಾನದ ಪ್ರಧಾನ ಅರ್ಚಕ ಮದ್ವಾಚಾರ್ಯ ಪೂಜಾರ್, ಬ್ರಾಹ್ಮಣ ಸಮುದಾಯದ ಅಧ್ಯಕ್ಷ ತಿಮ್ಮಪ್ಪಯ್ಯ ದೇಸಾಯಿ ಇತರರು ಇದ್ದರು.  
ಜಿಲ್ಲೆ

ವಿಭೂತಿ ರೂಪ ಇದ್ದಲ್ಲಿ ಅಸಾಧ್ಯವೂ ಸಾಧ್ಯ, ಶ್ರೀ ವಿದ್ಯಾಧೀಶ ತೀರ್ಥರು ಅಭಿಮತ

ಕುಷ್ಟಗಿ: ಭಗವಂತನ ವಿಭೂತಿ ರೂಪ (ಈಶ್ವರತ್ವ) ಇದ್ದಲ್ಲಿ ಅಸಾಧ್ಯವಾದುದು ಸಹ ಸಾಧ್ಯವಾಗುತ್ತದೆ ಎಂದು ಉಡುಪಿಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಹೇಳಿದರು.

ಪಟ್ಟಣದ ಅಡವಿ ಮುಖ್ಯ ಪ್ರಾಣೇಶ (ಅಡವಿರಾಯ) ದೇವಸ್ಥಾನದಲ್ಲಿ ಆಯೋಜಿಸಲಾಗಿರುವ ಶ್ರೀರಾಘವೇಂದ್ರ ಸಪ್ತಾಹ ಮಹೋತ್ಸವದ ಮೊದಲ ದಿನ ‘ವಿಭೂತಿ ಸಂಧಿ’ ಕುರಿತು ಅನುಗ್ರಹ ಸಂದೇಶ ನೀಡಿ ಶುಕ್ರವಾರ ಮಾತನಾಡಿದರು.

ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ದೇಶದ ಜನಸಂಖ್ಯೆಯ ಅರ್ಧದಷ್ಟು ಜನ ಭಾಗಿಯಾಗಿದ್ದು, ವಿಭೂತಿ ರೂಪ ಇರುವ ಅಲ್ಲಿನ ಮುಖ್ಯಮಂತ್ರಿ ಯೋಗಿಯಿಂದ ಮಾತ್ರ ಸಾಧ್ಯವಾಯಿತು. ಇಂತಹ ಕಾರ್ಯಕ್ಕೆ ದೇವರ ವಿಭೂತಿ ಅನುಸಂಧಾನ ಮಾಡುವವರು ಬೇಕು ಎನ್ನುವುದಕ್ಕೆ ಮಹಾಕುಂಭ ಮೇಳವೇ ಸಾಕ್ಷಿ. ಯಾವುದೇ ಸೌಕರ್ಯವೂ ಇಲ್ಲದೇ ಅಲ್ಲಿಯೇ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಕಾರಣದಿಂದ ವಿದೇಶದಿಂದ ಬಂದವರೂ ಖುಷಿಪಟ್ಟರು ಎಂದರು.

ನದಿಯಲ್ಲಿ ಮುಳುಗಿ ಎದ್ದರೆ ದಾರಿದ್ರ್ಯ ಪರಿಹಾರವಾಗುತ್ತದೆಯೇ ಎಂದು ಕೆಲವರು ವ್ಯಂಗ್ಯವಾಡಿದರು. ರಾಜ್ಯದ ಉಪ ಮುಖ್ಯಮಂತ್ರಿಯೇ ನದಿಯಲ್ಲಿ ಮುಳುಗಿ ಬಂದರು. ಉಳಿದವರೂ ಕದ್ದು ಮುಚ್ಚಿ ಹೋಗಿ ಬಂದರು. ಕರ್ನಾಟಕದಲ್ಲಿಯೂ ಕುಂಭಮೇಳ ಮಾಡಿದರಾದರೂ ಅದು ಕಸಮೇಳವಾಯಿತು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸಾಧ್ಯವಿತ್ತೇ ? ಅಸಾಧ್ಯ ಎಂಬುದನ್ನು ಸಾಧ್ಯವಾಗಿಸಿದ ಕೀರ್ತಿ ಈಶ್ವರತ್ವ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ದೇವರು ಕೃಷ್ಣ, ರಾಮನ ರೂಪದಲ್ಲಿ ಅವತರಿಸಿ ಸಿಂಹಾಸನದಲ್ಲಿ ಕೂಡದೇ ಜಗತ್ತನ್ನು ಆಳಿದ್ದಾನೆ. ರಾಮನ ರೂಪದಲ್ಲಿ ಬಂದ ಭಗವಂತ ಕಾಡಿಗೆ ಹೋಗಬೇಕು ಎಂದಾಗ ಏನನ್ನೂ ಯೋಚಿಸಿದೆ ಹೋಗಿದ್ದಾನೆ. ಕುರ್ಚಿಯಲ್ಲಿ ಕೂಡದೇ ಜಗತ್ತನ್ನು ಆಳಿದ ಅಭ್ಯಾಸ ಮನುಷ್ಯನಿಗಿಲ್ಲ ಎಂದರು.

ರಾಜ್ಯದಲ್ಲಿ ನಾನೇ ಸಿಎಂ, ನಾನೇ ಸಿಎಂ ಎಂದು ಕುರ್ಚಿಗಾಗಿ ಕಸರತ್ತು ಮಾಡುತ್ತಿದ್ದಾರೆ. ಇಲ್ಲಿ ಯಾರು ಮುಖ್ಯಮಂತ್ರಿಗಳಾದರೂ ಪ್ರಯೋಜವಿಲ್ಲ. ಮೇಲಿನವರು ಬರಬೇಕು. ಆಗ ಮಾತ್ರ ಕರ್ನಾಟಕ ಉದ್ಧಾರವಾಗುತ್ತದೆ ಎಂದು ರಾಜ್ಯದ ರಾಜಕೀಯವನ್ನು ಟೀಕಿಸಿದರು. ಪಲಿಮಾರು ಮಠದ ವಿದ್ಯಾರಾಜೇಶ್ವರ ತೀರ್ಥರು, ವಿದ್ವಾನ್ ಕೆ.ಅಪ್ಪಣ್ಣಾಚಾರ್ಯ ಇತರರು ಇದ್ದರು.

ಆಪತ್ತಿನ ಕಾಲದಲ್ಲಿ ನೆನಪಾಗೋರೇ ರಾಯರು: ಯತಿ, ಸ್ವಾಮಿ ಎಂದಾಕ್ಷಣ ನೆನಪಿಗೆ ಬರುವುದು ಶ್ರೀ ರಾಘವೇಂದ್ರ ಸ್ವಾಮಿಗಳು. ಆಪತ್ತಿನ ಕಾಲದಲ್ಲಿ ನೆನಪಾಗುವುದೂ ಅವರೇ ಆಗಿದ್ದಾರೆ. ಅವರಲ್ಲಿ ಭಗವಂತನ ವಿಶೇಷ ವಿಭೂತಿ ರೂಪ ಇದೆ. ರಾಯರ ಜಯಂತಿ, ಪಟ್ಟಾಭಿಷೇಕ ನೆರವೇರಿದ ಅದು ಕೇವಲ ಫಾಲ್ಗುಣ ಮಾಸವಲ್ಲ. ಬದಲಿಗೆ ಪರಿಪೂರ್ಣ ಮಾಸವಾಗಿದೆ ಎಂದು ಉಡುಪಿಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಹೇಳಿದರು.