ಕುಷ್ಟಗಿ ತಾಲೂಕು ಎಂ.ಗುಡದೂರು ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕಣ್ಣಿನ ತಜ್ಞ ಸುಶೀಲಾ ಕಾಖಂಡಕಿ ಕಣ್ಣಿನ ತಪಾಸಣೆ ಮಾಡಿದರು.  
ಜಿಲ್ಲೆ

ಗ್ರಾಮೀಣರಿಗೆ ಜಾಗೃತಿ ಮೂಡಿಸುವ ಕಾರ್ಯವಾಗಲಿ ಎಂದ ಶ್ರೀ ದೊಡ್ಡಬಸವಾರ್ಯ ಮಠದ ನೀಲಕಂಠ ಸ್ವಾಮೀಜಿ

ಕುಷ್ಟಗಿ: ಗ್ರಾಮಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳು ಹೆಚ್ಚೆಚ್ಚು ನಡೆಯಬೇಕು ಎಂದು ತಾಲೂಕಿನ ಎಂ.ಗುಡದೂರು ಗ್ರಾಮದ ಶ್ರೀ ದೊಡ್ಡಬಸವಾರ್ಯ ಮಠದ ನೀಲಕಂಠ ಸ್ವಾಮೀಜಿ ಹೇಳಿದರು.

ಶ್ರೀಮಠದಲ್ಲಿ ರೆಡ್ ಕ್ರಾಸ್ ದಿನಾಚರಣೆ ನಿಮಿತ್ತ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ತಾಲೂಕು ಘಟಕ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಶನಿವಾರ ಮಾತನಾಡಿದರು. ಗ್ರಾಮೀಣ ಭಾಗದ ಜನ ಗಂಭೀರ ಕಾಯಿಲೆಗೆ ತುತ್ತಾದಾಗ ಆಸ್ಪತ್ರೆಗೆ ಧಾವಿಸುತ್ತಾರೆ. ಅಸಾಂಕ್ರಾಮಿಕ ರೋಗಗಳಾದ ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಯ ಲಕ್ಷಣಗಳಿದ್ದರೂ ಕಾಲ ಕಾಲಕ್ಕೆ ಪರೀಕ್ಷೆ ಮಾಡಿಸದೆ ರೋಗ ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚುತ್ತಿದೆ. ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವ ಮೂಲಕ ಗ್ರಾಮೀಣರಿಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದರು.

ಮಕ್ಕಳ ತಜ್ಞ ಸಂಗಮೇಶ ಪಾಟೀಲ್, ಕಣ್ಣಿನ ತಜ್ಞ ಸುಶೀಲಾ ಕಾಖಂಡಕಿ, ದಂತ ವೈದ್ಯರಾದ ಈರಣ್ಣ ಸರೂರ, ವಿಜಯಕುಮಾರ ಬಿರಾದಾರ್, ಮಂಜುನಾಥ ಗೊಂಡಬಾಳ, ಕುಮುದಾ ಪಲ್ಲೇದ್, ಆಯುಷ್ ವೈದ್ಯರಾದ ಪಾರ್ವತಿ, ಮಲ್ಲಪ್ಪ ಪರೂಟಿ, ರವಿಕುಮಾರ ದಾನಿ, ಬಸವರಾಜ ವಸ್ತ್ರದ್, ಆರೋಗ್ಯ ತಪಾಣೆ ಮಾಡಿದರು.

ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರಾದ ಮಹಾಂತಯ್ಯ ಅರಳೆಲೆಮಠ, ಮಲ್ಲಿಕಾರ್ಜುನ ಬಳಿಗಾರ, ಆರ್.ಟಿ.ಸುಭಾನಿ, ಬಾಲಾಜಿ ಬಳಿಗಾರ, ಗ್ರಾಮಸ್ಥ ಚಂದ್ರಶೇಖರ ಮೆಂಟಗೇರಿ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಮಲ್ಲಪ್ಪ ಲಕ್ಷ್ಮೇಶ್ವರ ಇದ್ದರು. ಜ್ವರ, ಕೆಮ್ಮು, ನೆಗಡಿಯಂತಹ ಸಾಮಾನ್ಯ ಕಾಯಿಲೆಗೆ ಸ್ಥಳದಲ್ಲೇ ಔಷಧ ನೀಡಲಾಯಿತು. ರಕ್ತದೊತ್ತಡ, ಮಧುಮೇಹ ಪರೀಕ್ಷೆ ಹಾಗೂ ಹೃದಯ ಸಂಬಂಧಿ ಕಾಯಿಲೆಗೆ ಇಸಿಜಿ ಮಾಡಲಾಯಿತು. ಕಣ್ಣಿನ ಪೊರೆ ಕಾಣಿಸಿಕೊಂಡ ಆಯ್ದ ಕೆಲವರನ್ನು ಉಚಿತ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.