ಕುಷ್ಟಗಿ: ಕೊಪ್ಪಳ ಜಿಲ್ಲೆ ಕಾದಂಬರಿ ರಚನೆಗೆ ಪ್ರಸಿದ್ಧಿಯಾಗಿದೆ ಎಂದು ಸಿಂಧನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಜಾಜಿ ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಬಸವಭವನದಲ್ಲಿ ಭಾನುವಾರ ಕಸಾಪ ಹಾಗೂ ಅಕ್ಷರ ಸಂಗಾತದ ಪ್ರಕಾಶನದ ಸಹಯೋಗದಲ್ಲಿ ಏರ್ಪಡಿಸಿದ್ದ ತಾಲೂಕಿನ ನವಲಹಳ್ಳಿ ಗ್ರಾಮದ ಸಾಹಿತಿ ಮೌನೇಶ ನವಲಹಳ್ಳಿ ಅವರ ‘ನೀಲಿ ಹೊತ್ತಿಗೆ’ ಕಾದಂಬರಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾದಂಬರಿ ರಚನೆಗೆ ಜಿಲ್ಲೆಯಲ್ಲಿ ಪೂರಕ ವಾತಾವರಣ ಇದೆ. 1960ರ ಸಂದರ್ಭದಲ್ಲಿ ಜಿಲ್ಲೆಯ ಕನಕಗಿರಿಯವರೇ ಆದ ಪ್ರಸಿದ್ಧ ಕಥೆಗಾರ, ಕಾದಂಬರಿಕಾರ ಜಯತೀರ್ಥ ರಾಜಪುರೋಹಿತ ಅವರ ಕಾದಂಬರಿಗಳು ಮೈಸೂರು ಹಾಗೂ ಕಲಬುರಗಿ ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿದ್ದನ್ನು ಸ್ಮರಿಸಬಹುದು. ಬಹುಚರ್ಚೆಗೆ ಒಳಪಟ್ಟ ಕಾದಂಬರಿಗಳಲ್ಲಿ ಕೊಪ್ಪಳ ಜಿಲ್ಲೆಯ ಗ್ರಾಮಾಂತರ ಪ್ರದೇಶ ಅದರಲ್ಲಿಯೂ ರಜಾಕಾರರ ಆಳ್ವಿಕೆ ಅವಧಿಯಲ್ಲಿನ ಸಾಮಾಜಿಕ ಜೀವನವನ್ನು ಅನಾವರಣಗೊಳಿಸಿದ್ದರು.
ಕಾದಂಬರಿ ಬರೆಯುವವರ ಸಂಖ್ಯೆ ಕಡಿಮೆಯಾಗಿರುವ ಸಂದರ್ಭದಲ್ಲಿ ಸಾಹಿತಿ ಮೌನೇಶ ನವಲಹಳ್ಳಿ ಅವರು ಧಾರ್ಮಿಕ ಕೇಂದ್ರಗಳಲ್ಲಿನ ಲೈಂಗಿಕ ಶೋಷಣೆ ಹಾಗೂ ಲೈಂಗಿಕ ಅಕ್ರಮಗಳ ನೆಲೆಗಳನ್ನು ಕಡಿಮೆ ಪುಟದಲ್ಲಿ ಬಿಚ್ಚಿಡುವ ಕಾರ್ಯವನ್ನು ‘ನೀಲಿ ಹೊತ್ತಿಗೆ’ ಕಾದಂಬರಿ ಮೂಲಕ ಮಾಡಿದ್ದಾರೆ. ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಕಡಿಮೆ ಪುಟದಲ್ಲಿ ಕಾದಂಬರಿ ಬರೆಯುವುದು ಅನಿವಾರ್ಯವಾಗಿದೆ ಎಂದರು.
ಅಕ್ಷರ ಸಂಗಾತ ಪ್ರಕಾಶನದ ಸಂಪಾದಕ ಡಾ.ಟಿಎಸ್.ಗೊರವರ್ ಮಾತನಾಡಿ, ಬಡಗಿತನ ಮೂಲ ವೃತ್ತಿಯನ್ನಾಗಿಸಿಕೊಂಡಿರುವ ಮೌನೇಶ ನವಲಹಳ್ಳಿ ದುಡಿಮೆ ಮಧ್ಯೆ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿರುವುದು ವಿಶೇಷ. ‘ಪ್ರೀತಿಯ ಜಾತ್ರೆ’ ಎಂಬ ಕವನ ಸಂಕಲನ ಹೊರ ತಂದಿರುವ ಅವರು ಸದ್ಯ ಕಾದಂಬರಿ ರಚಿಸಿದ್ದಾರೆ. ಅಲಕ್ಷಿತ ವಲಯದಿಂದ ಬಂದವರಿಂದಲೇ ಸಾಹಿತ್ಯ ವಲಯ ಶ್ರೀಮಂತಗೊಳ್ಳುತ್ತಿದೆ ಎಂಬುದಕ್ಕೆ ಮೌನೇಶ ನವಲಹಳ್ಳಿ ಅವರೇ ಸಾಕ್ಷಿ ಎಂದರು.
ಸಾಹಿತಿ ಡಾ.ಕೆ.ಶರಣಪ್ಪ ನಿಡಶೇಸಿ ಮಾತನಾಡಿ, ಸಾಹಿತ್ಯದಲ್ಲಿ ಭಾಷೆಯನ್ನು ದುಡಿಸಿಕೊಳ್ಳುವ ಕಾರ್ಯವಾಗ ಬೇಕಿದೆ. ಮೌನೇಶ ನವಲಹಳ್ಳಿ ಅವರು ಕಾದಂಬರಿಯಲ್ಲಿ ಉತ್ತರ ಕರ್ನಾಟಕ ಭಾಷೆಯ ಪ್ರಯೋಗ ಮಾಡಿರುವುದು ಓದಿಸಿಕೊಂಡು ಹೋಗುವಂತೆ ಮಾಡಿದೆ ಎಂದರು.
ಸಾಹಿತಿಗಳಾದ ಡಾ.ವಸಂತಕುಮಾರ ಕಡ್ಲಿಮಟ್ಟಿ, ಜಹಾನ್ ಆರಾ ಕೋಳೂರು, ಶ್ರೀಕಾಂತ ಬೆಟಗೇರಿ, ಅಶೋಕ ಹೊಸಮನಿ, ರವಿ ದೇವರಡ್ಡಿ, ರವಿ ಹಾದಿಮನಿ, ದೇವರಾಜ ವಿಶ್ವಕರ್ಮ, ಶಿವನಗೌಡ ಪೊಲೀಸ್ ಪಾಟೀಲ್, ಮಹೇಶ ಹಡಪದ, ಎಸ್.ಎಸ್.ತೆಮ್ಮಿನಾಳ ಕಾದಂಬರಿಯ ಅವಲೋಕನ ಮಾಡಿದರು.
ಕಸಾಪ ತಾಲೂಕು ಅಧ್ಯಕ್ಷ ಲೆಂಕಪ್ಪ ವಾಲಿಕಾರ, ಕೇಂದ್ರ ಸಂಘ ಸಂಸ್ಥೆ ಪ್ರತಿನಿಧಿ ನಬಿಸಾಬ ಕುಷ್ಟಗಿ, ಪರಿಶಿಷ್ಟ ಜಾತಿ ಜಿಲ್ಲಾ ಪ್ರತಿನಿಧಿ ಎಸ್.ಜಿ.ಕಡೇಮನಿ, ಸಾಹಿತಿಗಳಾದ ಶೇಖರಗೌಡ ಸರನಾಡಗೌಡ, ಹನುಮೇಶ ಗುಮಗೇರಾ, ಡಾ.ಜೀವನಸಾಬ ಬಿನ್ನಾಳ, ಶರಣಪ್ಪ ವಡಗೇರಿ, ರವೀಂದ್ರ ಬಾಕಳೆ, ನಟರಾಜ ಸೋನಾರ, ಅಮರೇಗೌಡ ಪಾಟೀಲ್ ಜಾಲಿಹಾಳ, ಮೌನೇಶ ನವಲಹಳ್ಳಿ ಇತರರು ಇದ್ದರು.