ಕುಷ್ಟಗಿ ತಾಲೂಕಿನ ಹಿರೇನಂದಿಹಾಳ ಗ್ರಾಮದ ಸಾರ್ವಜನಿಕ ಗ್ರಂಥಾಲಯದಲ್ಲಿ ಗ್ರಂಥಾಲಯ ಪಿತಾಮಹಾ ಡಾ.ಎಸ್.ಆರ್.ರಂಗನಾಥನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ರಾಷ್ಟ್ರೀಯ ಗ್ರಂಥಪಾಲಕರ ದಿನ ಆಚರಿಸಲಾಯಿತು. ಗ್ರಾಪಂ ಪಿಡಿಒ ಹನುಮಂತರಾಯ, ಗ್ರಂಥಾಲಯ ಮೇಲ್ವಿಚಾರಕ ದೇವರಾಜ ಮ್ಯಾದನೇರಿ ಇತರರು ಇದ್ದರು. 
ಜಿಲ್ಲೆ

ಓದುವ ಅಭಿರುಚಿ ಹೆಚ್ಚಿಸಿಕೊಳ್ಳಿ

ಶಾಮಸುಂದರ್ ಕೊಪ್ಪಳಕರ್

ಕುಷ್ಟಗಿ: ಮೊಬೈಲ್ ವೀಕ್ಷಣೆಯಲ್ಲಿ ಸಮಯ ಕಳೆಯುವ ಬದಲು ಪುಸ್ತಕ ಓದುವ ಅಭಿರುಚಿ ಹೆಚ್ಚಿಸಿಕೊಂಡರೆ ಜ್ಞಾನವೃದ್ಧಿ ಜತೆಗೆ ಮಾನಸಿಕ ಆರೋಗ್ಯವೂ ವೃದ್ಧಿ ಆಗುತ್ತದೆ ಎಂದು ತಾಲೂಕಿನ ಹಿರೇನಂದಿಹಾಳ ಗ್ರಾಪಂ ಪಿಡಿಒ ಹನುಮಂತರಾಯ ಹೇಳಿದರು.

ಗ್ರಾಮದ ಸಾರ್ವಜನಿಕ ಗ್ರಂಥಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯಲ್ಲಿ ಮಾತನಾಡಿದರು. ಗ್ರಂಥಾಲಯಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಗ್ರಂಥಾಲಯ ಪಿತಾಮಹಾ ಡಾ.ಎಸ್.ರಂಗನಾಥನ್ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಗ್ರಾಪಂ ಕೇಂದ್ರ ಸ್ಥಾನಗಳಲ್ಲಿರುವ ಸಾರ್ವಜನಿಕ ಗ್ರಂಥಾಲಯದಲ್ಲಿ ವಿವಿಧ ಪುಸ್ತಕಗಳು, ಪತ್ರಿಕೆಗಳು ಲಭ್ಯ ಇರುತ್ತವೆ. ಸಾರ್ವಜನಿಕರು ಬಿಡುವಿನ ಸಮಯದಲ್ಲಿ ಬಂದು ಓದಬೇಕು. ಮಾಹಿತಿ, ಮನರಂಜನೆ ಇತ್ಯಾದಿ ವಿಷಯಗಳ ಜ್ಞಾನ ಗ್ರಂಥಾಲಯದಲ್ಲಿ ಸಿಗುತ್ತದೆ ಎಂದರು. ಗ್ರಂಥಾಲಯ ಮೇಲ್ವಿಚಾರಕ ದೇವರಾಜ ಮ್ಯಾದನೇರಿ ಮಾತನಾಡಿ, ಗ್ರಂಥಾಲಯಗಳು ಡಿಜಿಟಲ್ ಆಗಿ ಮಾರ್ಪಟ್ಟಿದ್ದು, ಪ್ರತಿಯೊಬ್ಬರೂ ಸದುಪಯೋಗ ಪಡೆಯಬೇಕಿದೆ ಎಂದರು.

ಗ್ರಂಥಾಲಯ ಅರಿವು ಹಾಗೂ ಮಾಹಿತಿ ಕೇಂದ್ರದ ಸಲಹಾ ಸಮಿತಿ ಸದಸ್ಯ ನಾಗಪ್ಪ ಕಲ್ಗುಡಿ, ಗ್ರಾಪಂ ಕರ ವಸೂಲಿಗಾರ ಭರಮಗೌಡ ಬಡಗಿ, ಕಂಪ್ಯೂಟರ್ ಆಪರೇಟರ್ ಫಕೀರಪ್ಪ ಗುಡಿಹೊಲ, ಪ್ರಮುಖರಾದ ಮಂಜುನಾಥ ಬಿಸನಾಳ, ಧರ್ಮಣ್ಣ ದುರುಗಣ್ಣವರ್, ನಾಗಪ್ಪ ಅಂಗಡಿ, ಬಸವನಗೌಡ ಗೌಡ್ರ, ಹುಚ್ಚೀರಪ್ಪ ಗುರಿಕಾರ ಇತರರು ಇದ್ದರು.