ಕುಷ್ಟಗಿ ಪುರಸಭೆ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅನಧಿಕೃ ನಿವೇಶನಗಳಿಗೆ ಖಾತಾ ಉತಾರ್ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸದಸ್ಯರಾದ ಕಲ್ಲೇಶ ತಾಳದ್, ಜಿ.ಕೆ.ಹಿರೇಮಠ, ಮೈನುದೀನ್ ಮುಲ್ಲಾ ಇತರರಿದ್ದರು.  
ಜಿಲ್ಲೆ

ಅನಧಿಕೃತ ನಿವೇಶನಗಳಿಗೆ ಖಾತಾ ಉತಾರ್ ನೀಡದಿರಿ

ಕುರುವತ್ತಿ ಶ್ರೀಕಾಂತಪ್ಪ

ಕುಷ್ಟಗಿ: ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಪಟ್ಟಣದಲ್ಲಿ ಹೆಚ್ಚುತ್ತಿರುವ ಅನಧಿಕೃತ ಲೇಔಟ್‌ಗಳ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಲೇಔಟ್‌ಗಳಲ್ಲಿ ಪೂರ್ಣ ಪ್ರಮಾಣದ ಅಭಿವೃದ್ಧಿ ಕಾರ್ಯ ನಡೆಯದೇ ನಿವೇಶನಗಳ ಮಾರಾಟಕ್ಕೆ ಖಾತಾ ಉತಾರ್ ನೀಡುವುದನ್ನು ನಿಲ್ಲಿಸಬೇಕೆಂದು ಸದಸ್ಯರು ಒತ್ತಾಯಿಸಿದರು.

ಪಟ್ಟಣದಲ್ಲಿ ಕೆಲ ಲೇಔಟ್‌ಗಳಿಗೆ ಎನ್‌ಎ ಆಗಿ ಟೌನ್ ಪ್ಲಾನಿಂಗ್ ಅನುಮೋದನೆಯಾಗಿಲ್ಲ. ಎನ್‌ಎ ಜತೆಗೆ ಟೌನ್‌ಪ್ಲಾನ್ ಇದ್ದಾಗ್ಯೂ ಸ್ಥಳೀಯವಾಗಿ ತಯಾರಿಸಿಕೊಂಡ ನಕ್ಷೆ ಆಧರಿಸಿ ನಿವೇಶನಗಳ ಮಾರಾಟಕ್ಕೆ ಖಾತಾ ಉತಾರ್ ನೀಡಲಾಗುತ್ತಿದೆ. ಬಹುತೇಕ ಲೇಔಟ್‌ಗಳಲ್ಲಿ ನಾಗರಿಕ ಸೌಲಭ್ಯಕ್ಕೆ, ಉದ್ಯಾನ, ರಸ್ತೆಗೆಂದು ಮೀಸಲಿಟ್ಟ ಜಾಗವನ್ನು ನಿವೇಶನವನ್ನಾಗಿ ಪರಿವರ್ತಿಸಿ ಮಾರಾಟ ಮಾಡಲಾಗುತ್ತಿದೆ.

ಸ್ಥಳೀಯವಾಗಿ ತಯಾರಿಸಿದ ನಕ್ಷೆಯ ಸಹಾಯದಿಂದ ಇಂತಹ ನಿವೇಶನಗಳಿಗೆ ಖಾತಾ ಉತಾರ್ ನೀಡುತ್ತ ಬರಲಾಗಿದೆ. ಸದ್ಯ ಅಂತಹ ನಿವೇಶನಗಳಲ್ಲಿ ಕಟ್ಟಡಗಳು ತಲೆ ಎತ್ತಿವೆ. ಇನ್ನು ಮುಂದೆ ಇಂತಹ ಅನಧಿಕೃತ ನಿವೇಶನಗಳಿಗೆ ಖಾತಾ ಉತಾರ್ ನೀಡುವುದನ್ನು ನಿಲ್ಲಿಸಿ ಉದ್ಯಾನ ಹಾಗೂ ನಾಗರಿಕ ಸೌಲಭ್ಯಕ್ಕೆಂದು ಮೀಸಲಿಟ್ಟ ಜಾಗಗಳ ರಕ್ಷಣೆ ಮಾಡಬೇಕೆಂದು ಸದಸ್ಯರು ಆಗ್ರಹಿಸಿದರು.

ಪಟ್ಟಣದ ಸಂದೀಪ ನಗರದ ಆಶ್ರಯ ಕಾಲನಿಯಲ್ಲಿ 79 ಮನೆಗಳಿದ್ದವು. ಸದ್ಯ ಮನೆಗಳ ಸಂಖ್ಯೆ 204ಕ್ಕೆ ಏರಿದೆ. ಮೂಲ ನಿವಾಸಿಗಳ ಜತೆಗೆ ತಮಗೂ ಹಕ್ಕುಪತ್ರ ನೀಡುವಂತೆ ಹೆಚ್ಚುವರಿ ಮನೆಗಳ ನಿವಾಸಿಗಳು ಆಗ್ರಹಿಸುತ್ತಿದ್ದಾರೆ. ಕಳೆದ 10-15ವರ್ಷಗಳಿಂದ ವಾಸವಿರುವ ಮನೆಗಳಿಗೆ ಮಾತ್ರ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಸದಸ್ಯ ಮೈನುದ್ದೀನ್ ಮುಲ್ಲಾ ಒತ್ತಾಯಿಸಿದರು.

ಕುಡಿವ ನೀರಿನ ಶುದ್ದೀಕರಣ ಘಟಕಗಳನ್ನು ದುರಸ್ತಿಗೊಳಿಸುವುದು, ಸಂತೆ ಮೈದಾನದಲ್ಲಿ ಸುಸುಜ್ಜಿತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು, ಪಟ್ಟಣದ ಸ್ವಚ್ಛತೆ, ಸ್ಥಾಯಿ ಸಮಿತಿ ರಚನೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಯಿತು. ಪುರಸಭೆ ಅಧ್ಯಕ್ಷ ಮಹಾಂತೇಶ ಕಲಬಾವಿ, ಉಪಾಧ್ಯಕ್ಷೆ ನಾಹೀನಾ ಬೇಗಂ, ಮುಖ್ಯಾಧಿಕಾರಿ ಧರಣೇಂದ್ರಕುಮಾರ್ ಇದ್ದರು. ಕಲ್ಲೇಶ ತಾಳದ್, ಜಿ.ಕೆ.ಹಿರೇಮಠ, ನಾಗರಾಜ ಹಿರೇಮಠ ಸೇರಿದಂತೆ ವಿವಿಧ ವಾರ್ಡ್‌ಗಳ ಸದಸ್ಯರು ಹಾಗೂ ನಾಮ ನಿರ್ದೇಶಿತ ಸದಸ್ಯರು ಪಾಲ್ಗೊಂಡಿದ್ದರು.

ಚರಂಡಿ-ರಸ್ತೆ ನಿರ್ಮಿಸಲು ಮನವಿ: ವಾರ್ಡ್ ವ್ಯಾಪ್ತಿಯ ಎಲ್ಲ ಬಡಾವಣೆಗಳಲ್ಲಿ ನಾಗರಿಕ ಸೌಲಭ್ಯ ಹಾಗೂ ಉದ್ಯಾನಕ್ಕೆ ಮೀಸಲಿರಿಸಿದ ಜಾಗಗಳನ್ನು ಅಭಿವೃದ್ಧಿಪಡಿಸುವಂತೆ ಪಟ್ಟಣದ 3ನೇ ವಾರ್ಡ್‌ನ ರಹವಾಸಿಗಳ ಸಂಘದ ಪದಾಧಿಕಾರಿಗಳು ಇದೇ ವೇಳೆ ಪುರಸಭೆ ಅಧ್ಯಕ್ಷ ಮಹಾಂತೇಶ ಕಲಬಾವಿ ಹಾಗೂ ಮುಖ್ಯಾಧಿಕಾರಿ ಧರಣೇಂದ್ರಕುಮಾರ್‌ಗೆ ಮನವಿ ಸಲ್ಲಿಸಿದರು. ರಾಜಕಾಲುವೆಯ ವೈಜ್ಞಾನಿಕ ಕಾಮಗಾರಿ ಆರಂಭಿಸಿ ಅಗತ್ಯವಿರುವ ಕಡೆ ಚರಂಡಿ ನಿರ್ಮಿಸಿ ಸಿಸಿ/ಡಾಂಬರ್ ರಸ್ತೆ ನಿರ್ಮಿಸಬೇಕೆಂದು ಒತ್ತಾಯಿಸಿದರು. ಸಂಘದ ಅಧ್ಯಕ್ಷ ಡಿ.ಬಿ.ಗಡೇದ್, ಸಹ ಕಾರ್ಯದರ್ಶಿ ಬಸವರಾಜ ಗಾಣಿಗೇರ, ಬಾಬು ಘೋರ್ಪಡೆ ಇತರರು ಇದ್ದರು.