ಕುಷ್ಟಗಿ: ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. 2020-21ನೇ ಸಾಲಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 5ಪಟ್ಟು , ವಿದ್ಯಾರ್ಥಿನಿಯರ ಸಂಖ್ಯೆ 12ಪಟ್ಟು ಹೆಚ್ಚಾಗಿರುವುದು ವಿಷೇಶ.
ಪಟ್ಟಣದ ಟೆಂಗುಂಟಿ ರಸ್ತೆಯ ನಿರ್ಜನ ಪ್ರದೇಶದಲ್ಲಿರುವ ಪಾಲಿಟೆಕ್ನಿಕ್‌ಗೆ 2ಕಿಮೀ ಕಾಲ್ನಡಿಗೆಯಲ್ಲಿಯೇ ತೆರಳಬೇಕಿದೆ. ತಾಂತ್ರಿಕ ಶಿಕ್ಷಣ ಪಡೆಯಬೇಕೆಂಬ ಹಂಬಲವಿದ್ದರೂ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಬಹುತೇಕ ಪಾಲಕರು ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದರು.
2 ವರ್ಷದ ಹಿಂದೆ ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡಿರುವ ಡಾ.ಹನುಮೇಶ್, ಉಪನ್ಯಾಸಕರೊಂದಿಗೆ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಮನೆ ಮನೆಗೆ ಭೇಟಿ ಮಾಡಿ ತಾಂತ್ರಿಕ ಶಿಕ್ಷಣದ ಮಹತ್ವ ಹಾಗೂ ಉದ್ಯೋಗವಕಾಶಗಳ ಭರವಸೆಯನ್ನು ಪಾಲಕರಿಗೆ ನೀಡಿದ ಫಲವಾಗಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ.
ಹಾಸ್ಟೆಲ್‌ನಲ್ಲಿ ಸೀಟು ಸಿಗದೆ ಗ್ರಾಮಗಳಿಂದ ಬಂದು ಹೋಗುತ್ತಿದ್ದ 19ಬಾಲಕರಿಗೆ ಕಾಲೇಜು ಆವರಣದಲ್ಲಿ ನಿರ್ಮಿಸಿರುವ ವಸತಿ ನಿಲಯದಲ್ಲಿರಲು ಹೇಳಿ ಊಟದ ವ್ಯವಸ್ಥೆಯನ್ನೂ ಪ್ರಾಚಾರ್ಯ ಹಾಗೂ ಉಪನ್ಯಾಸಕರು ಮಾಡುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಒಟ್ಟು 382ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಪಡೆಯುತ್ತಿದ್ದಾರೆ.
1996ರಲ್ಲಿ ಆರಂಭವಾದ ಪಾಲಿಟೆಕ್ನಿಕ್‌ನಲ್ಲಿ ಈವರೆಗೆ ವಿದ್ಯಾರ್ಥಿಗಳ ಸಂಖ್ಯೆ ನೂರರ ಗಡಿ ತಲುಪಿರಲಿಲ್ಲ. 2020-21ನೇ ಸಾಲಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್‌ನಲ್ಲಿ 65, ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಷನ್‌ನಲ್ಲಿ 8 ಹಾಗೂ ಕಂಪ್ಯೂಟರ್ ಸೈನ್ಸ್‌ನಲ್ಲಿ 7 ಒಟ್ಟು 80 ವಿದ್ಯಾರ್ಥಿಗಳು ಮಾತ್ರ ಇದ್ದರು. ಆ ಪೈಕಿ ಮೂರೂ ವಿಭಾಗ ಸೇರಿ ಕೇವಲ 6 ವಿದ್ಯಾರ್ಥಿನಿಯರು ಇದ್ದರು.
ಪ್ರಸಕ್ತ ಸಾಲಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ 155, ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಷನ್ ವಿಭಾಗದಲ್ಲಿ 145 ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ 82ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಮೂರೂ ವಿಭಾಗದಲ್ಲಿ ಒಟ್ಟು 72 ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
18 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಪಾಲಿಟೆಕ್ನಿಕ್ ಕಾಲೇಜು ಕಟ್ಟಡ ಜತೆಗೆ 2 ಕೋಟಿ ರೂ. ವೆಚ್ಚದಲ್ಲಿ ಆಡಿಟೋರಿಯಂ ನಿರ್ಮಿಸಲಾಗಿದೆ. ತಾಂತ್ರಿಕ ಶಿಕ್ಷಣ ಇಲಾಖೆಯ 2016-17ನೇ ಸಾಲಿನ 1.5ಕೋಟಿ ರೂ. ಅನುದಾನದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರಿಗೆ ವಸತಿ ನಿಲಯ, 2ಕೋಟಿ ರೂ. ಅನುದಾನದಲ್ಲಿ ಬಾಲಕರಿಗಾಗಿ ಪ್ರತ್ಯೇಕ ವಸತಿ ನಿಲಯ ಕಟ್ಟಡ ನಿರ್ಮಿಸಲಾಗಿದೆ.
2010-11ನೇ ಸಾಲಿನ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ 90ಲಕ್ಷ ರೂ. ಅನುದಾನಲ್ಲಿ ನಿರ್ಮಿಸಿದ್ದ ಮಹಿಳಾ ವಸತಿ ನಿಲಯ ಕಟ್ಟಡ ಸದ್ಯ ಪಾಳು ಬಿದ್ದಿದೆ. ಲೋಕೋಪಯೋಗಿ ಇಲಾಖೆ ನಿರ್ಮಿಸಿರುವ ಸಿಬ್ಬಂದಿ ವಸತಿ ಗೃಹ ಕಟ್ಟಡವೂ ನಿರುಪಯುಕ್ತವಾಗಿ ಶಿಥಿಲಾವಸ್ಥೆ ತಲುಪಿದೆ. ವರ್ಕ್‌ಶಾಪ್‌ಗೂ ಪ್ರತ್ಯೇಕ ಕಟ್ಟಡ ನಿರ್ಮಿಸಲಾಗಿದೆಯಾದರೂ ನಿರ್ವಹಣೆ ಕೊರತೆಯಿಂದ ಕಿಟಕಿಗಳ ಗಾಜುಗಳು ಒಡೆದು ಹೋಗಿವೆ.
ವಿಶಾಲ ಆವರಣದಲ್ಲಿ 400ಕ್ಕೂ ಹೆಚ್ಚು ವಿವಿಧ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಕಟ್ಟಡಗಳಿಗೆ ಕೋಟಿಗಟ್ಟಲೇ ಖರ್ಚು ಮಾಡುತ್ತಿರುವ ಸರ್ಕಾರ, ವಿದ್ಯಾರ್ಥಿಗಳಿಗೆ ಅಗತ್ಯವಿರುವ ವಾಹನ ಸೌಕರ್ಯ ಕಲ್ಪಿಸದರೆ ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಹೆಚ್ಚಲಿದೆ ಎನ್ನುತ್ತಿದ್ದಾರೆ ಅಲ್ಲಿನ ಉಪನ್ಯಾಸಕರು.
ತಾಂತ್ರಿಕ ಶಿಕ್ಷಣ ಪಡೆದರೆ ವಿದ್ಯಾರ್ಥಿಗಳು ಸ್ವಾವಲಂಬಿ ಜೀವನ ನಡೆಸುತ್ತಾರೆ. ಈ ಕಾರಣದಿಂದಲೇ ತಾಲೂಕಿನಲ್ಲಿ ತಾಂತ್ರಿಕ ಶಿಕ್ಷಣ ಮುಂದುವರಿಯಬೇಕೆಂಬ ಉದ್ದೇಶದಿಂದ ಗ್ರಾಮಗಳಿಗೆ ತೆರಳಿ ಮನೆ ಮನೆಗೆ ಭೇಟಿ ನೀಡಿ ಪಾಲಕರಿಗೆ ತಾಂತ್ರಿಕ ಶಿಕ್ಷಣದ ಮಹತ್ವ ಹಾಗೂ ಉದ್ಯೋಗಾವಕಾಶ ಕುರಿತು ಮನವರಿಕೆ ಮಾಡಿದ್ದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಪಟ್ಟಣದಿಂದ ಹೊರಗಿರುವ ಕಾಲೇಜಿಗೆ ರಾಷ್ಟ್ರೀಯ ಹೆದ್ದಾರಿ ದಾಟಿ ಕಾಲ್ನಡಿಗೆಯಲ್ಲಿಯೇ ಬರುತ್ತಿರುವ ವಿದ್ಯಾರ್ಥಿಗಳಿಗೆ ವಾಹನ ಸೌಕರ್ಯ ಕಲ್ಪಿಸಿದರೆ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ.ಡಾ.ಹನುಮೇಶಪ್ರಾಚಾರ್ಯ, ಸರ್ಕಾರಿ ಪಾಲಿಟೆಕ್ನಿಕ್ ಕುಷ್ಟಗಿ