ಕುಷ್ಟಗಿ: ಲೇಔಟ್‌ಗಳನ್ನು ನಿಯಮಾನುಸಾರ ಅಭಿವೃದ್ಧಿಪಡಿಸದೆ ಶೇ.100 ನಿವೇಶನಗಳಿಗೆ ಖಾತಾ ಉತಾರ್ ನೀಡುತ್ತಿರುವ ಪುರಸಭೆಗೆ ತಹಸೀಲ್ದಾರ್ ಅಶೋಕ್ ಶಿಗ್ಗಾವಿ ನೋಟಿಸ್ ಜಾರಿ ಮಾಡಿ, ಲೋಪಗಳ ಕುರಿತು ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಂಡು ಸ್ಪಷ್ಟ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಪಟ್ಟಣದಲ್ಲಿ ತಲೆ ಎತ್ತುತ್ತಿರುವ ಲೇಔಟ್‌ಗಳ ಕುರಿತು ‘ಮನೆಗಳಿಗಿಂತ ನಿವೇಶನಗಳೇ ಹೆಚ್ಚು’ ಶೀರ್ಷಿಕೆ ಅಡಿ ಫೆ.5ರಂದು ವಿಜಯವಾಣಿ ಪ್ರಕಟಿಸಿದ್ದ ವಿಸ್ತೃತ ವರದಿ ಉಲ್ಲೇಖಿಸಿ ನೋಟಿಸ್ ನೀಡಿರುವ ತಹಸೀಲ್ದಾರ್ ಅಶೋಕ ಶಿಗ್ಗಾವಿ, ಭೂ ಪರಿವರ್ತಿತ ಜಮೀನಿನಲ್ಲಿ ನಾಗರಿಕ ಸೌಲಭ್ಯಗಳಾದ ವಿದ್ಯುತ್, ನೀರು, ಒಳಚರಂಡಿ ಇತ್ಯಾದಿ ಸೌಕರ್ಯಗಳ ಜತೆ ಕಾನೂನು ರೀತಿ ಭದ್ರತಾ ವ್ಯವಸ್ಥೆ ಮಾಡಬೇಕೆಂಬ ನಿಯಮ ಇದ್ದರೂ ಯಾವುದೇ ಮೂಲ ಸೌಕರ್ಯ ಇಲ್ಲದಿದ್ದರೂ ಶೇ.ನೂರು ನಿವೇಶನಗಳಿಗೆ ಖಾತಾ ಉತಾರ್ ನೀಡುತ್ತಿರುವ ಬಗ್ಗೆ ಹಾಗೂ ಅಂತಹ ಆಸ್ತಿಗಳಿಗೆ ಸಂಬಂಧಿಸಿದ ವಸತಿ ವಿನ್ಯಾಸದ ಆದೇಶ ರದ್ದುಪಡಿಸಿ ಖಾತಾ ಉತಾರ್ ತಡೆಹಿಡಿಯಬೇಕೆಂದು ಸಾರ್ವಜನಿಕರು ಪತ್ರ ಬರೆದರೂ ಉದಾಸೀನ ತೋರುತ್ತಿದ್ದೆರೆಂಬುದು ಗೊತ್ತಾಗಿದೆ. ಕೂಡಲೇ ಅಂತಹ ಲೇಔಟ್‌ಗಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದ್ದಾರೆ.