ಕುಷ್ಟಗಿ: ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೀಡಿರುವ ಹೇಳಿಕೆ ತಳ ಬುಡ ಇಲ್ಲದ್ದು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ತಾಲೂಕಿನ ಕಡೇಕೊಪ್ಪದಲ್ಲಿ ಶುಕ್ರವಾರ ಸಂಜೆ ಕೊಪ್ಪಳ ಏತ ನೀರಾವರಿ ಯೋಜನೆ ಕಾಮಗಾರಿ ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಗುತ್ತಿಗೆದಾರನ ಆತ್ಮಹತ್ಯೆಗೂ ಸಚಿವ ಪ್ರಿಯಾಂಕ್ ಖರ್ಗೆಗೂ ಯಾವುದೇ ಸಂಬಂಧ ಇಲ್ಲ. ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಹೆಸರು ಎಲ್ಲೂ ಪ್ರಸ್ತಾಪವಾಗಿಲ್ಲ. ವಿಪಕ್ಷ ನಾಯಕ ತಳ ಬುಡ ಇಲ್ಲದ ದಾಖಲೆಯನ್ನಾದರೂ ಪ್ರದರ್ಶಿಸುತ್ತಾರೆ ಅಂಗಿಯನ್ನಾದರೂ ಹರಿದುಕೊಳ್ಳುತ್ತಾರೆ. ಹಾಗಂತ ರಾಜೀನಾಮೆ ಕೊಡಬೇಕೇ ಎಂದು ಪ್ರಶ್ನಿಸಿದರು.
ಬಿಜೆಪಿಯ ಮುಕ್ಕಾಲು ನಾಯಕರುಗಳ ಮೇಲೆ ಕೇಸ್‌ಗಳಿವೆ. ಈವರೆಗೆ ಯಾರೊಬ್ಬರಾದರೂ ರಾಜೀನಾಮೆ ಕೊಟ್ಟಿದ್ದಾರೆಯೇ? ಉಪ ಚುನಾವಣೆಯಲ್ಲಿ ಮೂರೂ ಕಡೆ ಸೋತರೂ ಬಿಜೆಪಿಯವರಿಗೆ ಬುದ್ಧಿ ಬಂದಿಲ್ಲ. ನಾಯಕತ್ವ ಇಲ್ಲದೆ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುವುದು ಬಿಜೆಪಿಗರಿಗೆ ರೂಢಿಯಾಗಿದೆ. ದುಡ್ಡಿದೆ ಎಂಬ ಕಾರಣಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡಿರುವ ವಿಜಯೇಂದ್ರಗೆ ಅನುಭವವೂ ಇಲ್ಲ. ತಿಳಿವಳಿಕೆಯೂ ಇಲ್ಲ ಎಂದು ಲೇವಡಿ ಮಾಡಿದರು.