ಕುಷ್ಟಗಿಯಲ್ಲಿ ರೈತ ಸಂಘದ ಪದಾಧಿಕಾರಿಗಳು ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್‌ಗೆ ಮಂಗಳವಾರ ಮನವಿ ಸಲ್ಲಿಸಿದರು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಜೀರಸಾಬ ಮೂಲಿಮನಿ, ತಾಲೂಕು ಗೌರವ ಅಧ್ಯಕ್ಷ ಶಂಕರಗೌಡ ಬೀಳಗಿ, ಪ್ರಧಾನ ಕಾರ್ಯದರ್ಶಿ ದೊಡ್ಡಪ್ಪ ಸಜ್ಜಲಗುಡ್ಡ ಇದ್ದರು.  
ಜಿಲ್ಲೆ

ಸದನದಲ್ಲಿ ಧ್ವನಿ ಎತ್ತಲು ಮನವಿ

ಕುಷ್ಟಗಿ: ಕೊಪ್ಪಳ ಏತ ನೀರಾವರಿ ಯೋಜನೆ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸುವ ಮೂಲಕ ಈ ಭಾಗದ ರೈತರಿಗೆ ದ್ರೋಹ ಬಗೆಯುತ್ತಿದೆ. ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವಂತೆ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ವಿಧಾನಸಭೆ ವಿರೋಧ ಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ್‌ಗೆ ಮಂಗಳವಾರ ಮನವಿ ಸಲ್ಲಿಸಿದರು.

ಕೃಷ್ಣಾ ಮೇಲ್ದಂಡೆ ಹಂತ 3ರ ಅಡಿ ಬರುವ 9 ಉಪ ಯೋಜನೆಗಳಲ್ಲಿ ಒಂದಾಗಿರುವ ಕೊಪ್ಪಳ ಏತ ನೀರಾವರಿ ಯೋಜನೆ ಅನುಷ್ಠಾನದಿಂದ ಕುಷ್ಟಗಿ, ಯಲಬುರ್ಗಾ ಹಾಗೂ ಕನಕಗಿರಿ ಭಾಗದ 112015 ಹೆಕ್ಟೇರ್ ಪ್ರದೇಶ ನೀರಾವರಿಗೊಳಪಡಲಿದೆ. ಈ ಹಿಂದೆ ಕೃಷ್ಣೆಯಡೆಗೆ ಪಾದಯಾತ್ರೆ ನಡೆಸಿದ ಕಾಂಗ್ರೆಸ್ ಪಕ್ಷದ ಪ್ರಮುಖರು, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಭಾಗದ ನೀರಾವರಿ ಯೋಜನೆಗೆ ವಾರ್ಷಿಕ 10ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು.

ಮಾತಿಗೆ ತಪ್ಪಿ ರೈತರಿಗೆ ದ್ರೋಹ ಬಗೆಯುವ ಕಾರ್ಯ ಮಾಡುತ್ತಿದ್ದಾರೆ. ಈ ಸಂಬಂಧ ಸದನದಲ್ಲಿ ಧ್ವನಿ ಎತ್ತಿ ಈ ಭಾಗದ ರೈತರ ನೀರಾವರಿ ಕನಸಿಗೆ ನೀರೆರೆಯುವ ಕಾರ್ಯ ಮಾಡುವಂತೆ ಮನವಿ ಮಾಡಿದರು. ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಜೀರಸಾಬ ಮೂಲಿಮನಿ, ತಾಲೂಕು ಗೌರವ ಅಧ್ಯಕ್ಷ ಶಂಕರಗೌಡ ಬೀಳಗಿ, ಪ್ರಧಾನ ಕಾರ್ಯದರ್ಶಿ ದೊಡ್ಡಪ್ಪ ಸಜ್ಜಲಗುಡ್ಡ ಇದ್ದರು.