ಕುಷ್ಟಗಿ ತಾಲೂಕು ಕಡೇಕೊಪ್ಪದಲ್ಲಿ ಭಾನುವಾರ ಏರ್ಪಡಿಸಿದ್ದ ಕಿತ್ತೂರು ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು. ನಿಲೋಗಿಯ ಶಿವಾನಂದೇಶ್ವರ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ವೀರಶೈವ ಲಿಂಗಾಯತ ಸಮುದಾಯದ ಜಿಲ್ಲಾಧ್ಯಕ್ಷ ಕಳಕನಗೌಡ ಪಾಟೀಲ್, ಪಂಚಮಸಾಲಿ ಸಮುದಾಯದ ತಾಲೂಕು ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ ಇತರರಿದ್ದರು.  
ಜಿಲ್ಲೆ

ಮೀಸಲಾತಿ ಪಡೆಯಲು ಕ್ರಾಂತಿಯ ಹೆಜ್ಜೆ ಅನಿವಾರ್ಯ

ಕುರುವತ್ತಿ ಶ್ರೀಕಾಂತಪ್ಪ

ಕುಷ್ಟಗಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಈವರೆಗೆ ಶಾಂತಿಯುತ ಹೋರಾಟ ಮಾಡುತ್ತ ಬರಲಾಗಿದೆ. ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಬೇಸತ್ತು ಕ್ರಾಂತಿಕಾರಿ ಹೆಜ್ಜೆ ಇಡುವ ಅನಿವಾರ್ಯತೆ ಬಂದೊದಗಿದೆ ಎಂದು ಲಿಂಗಾಯತ ಪಂಚಮಸಾಲಿ ಕೂಡಲಸಂಗಮ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ತಾಲೂಕಿನ ಕಡೇಕೊಪ್ಪ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ ಹಾಗೂ 202ನೇ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 2ಎ ಮೀಸಲಾತಿಗೆ ಆಗ್ರಹಿಸಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತ ಬಂದರೂ ಆಡಳಿತಾರೂಢ ಸರ್ಕಾರಗಳು ಸ್ಪಂದಿಸದೆ ಉದಾಸೀನ ತೋರುತ್ತಿವೆ. ಶಾಂತಿಯುತ ಹೋರಾಟದಲ್ಲಿ ಪಾಲ್ಗೊಂಡವರ ಮೇಲೆ ಲಾಠಿ ಚಾರ್ಜ್ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ದರ್ಪ ತೋರಿರುವುದು ಸಮುದಾಯದವರನ್ನು ಮತ್ತಷ್ಟು ಕೆರಳಿಸಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಸಿದರು. ಲಾಠಿ ಚಾರ್ಜ್ ಮಾಡಿರುವ ಸರ್ಕಾರದ ವಿರುದ್ಧ ಕೇಂದ್ರ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸುವುದಾಗಿ ತಿಳಿಸಿದರು.

ನಿಲೋಗಿಯ ಶಿವಾನಂದೇಶ್ವರ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೀರಶೈವ ಲಿಂಗಾಯತ ಸಮುದಾಯದ ಜಿಲ್ಲಾಧ್ಯಕ್ಷ ಕಳಕನಗೌಡ ಪಾಟೀಲ್, ಪಂಚಮಸಾಲಿ ಸಮುದಾಯದ ತಾಲೂಕು ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ, ಪ್ರಮುಖರಾದ ಬಸವರಾಜ ಕ್ಯಾವಟರ್, ಶಕುಂತಲಾ ಪಾಟೀಲ್, ಅಮರೇಗೌಡ ಪಾಟೀಲ್, ಸಂಗನಗೌಡ ಪಾಟೀಲ್, ಬಸವರಾಜ ಪಾಟೀಲ್, ದೊಡ್ಡಪ್ಪ ಕಂದಕೂರು, ಕಳಕೇಶ ನಾಲತ್ವಾಡ, ಸುರೇಶ ಕೌದಿ, ಡಾ.ನಾಗರತ್ನಾ ಬಾವಿಕಟ್ಟಿ, ವಿಜಯಕುಮಾರ, ರಮೇಶ ಗಡಾದ್, ಮಲ್ಲಿಕಾರ್ಜುನ ಪಾಟೀಲ್, ಜೆ.ಶರಣಪ್ಪ, ಶಾಂತಗೌಡ ಪಾಟೀಲ್ ಇತರರು ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ಕಿತ್ತೂರು ರಾಣಿ ಚನ್ನಮ್ಮ ವೃತ್ತಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದ ಭಾವಚಿತ್ರ ಮೆರವಣೆಗೆಯಲ್ಲಿ ಮಹಿಳೆಯರು ಕಳಸ ಹಿಡಿದು ಸಾಗಿದರು.