ಕುಷ್ಟಗಿಯಲ್ಲಿ ಇಂದಿರಾ ಕ್ಯಾಂಟೀನ್‌ಗೆ ಶಾಸಕ ದೊಡ್ಡನಗೌಡ ಪಾಟೀಲ್ ಚಾಲನೆ ನೀಡಿದರು. ಪುರಸಭೆ ಅಧ್ಯಕ್ಷ ಮಹಾಂತೇಶ ಕಲಬಾವಿ, ಸದಸ್ಯರಾದ ಕಲ್ಲೇಶ ತಾಳದ್, ಜಿ.ಕೆ.ಹಿರೇಮಠ, ಮುಖ್ಯಾಧಿಕಾರಿ ಸುರೇಶ ಶೆಟ್ಟಿ ಇತರರು ಇದ್ದರು. 
ಜಿಲ್ಲೆ

ಜನರಿಗೆ ಶುಚಿ-ರುಚಿಯ ಆಹಾರ ತಯಾರಿಸಿ

ಕುಷ್ಟಗಿ: ಸುಸಜ್ಜಿತ ಕಟ್ಟಡದಲ್ಲಿ ಶುಚಿ-ರುಚಿಯಾದ ಆಹಾರ ತಯಾರಿಕೆಯಾಗಬೇಕಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಹೇಳಿದರು.

ಪಟ್ಟಣದ ಸಾರಿಗೆ ಘಟಕದ ಕಾಂಪೌಂಡ್‌ಗೆಹೊಂದಿಕೊಂಡು ನಿರ್ಮಿಸಿರುವ ಇಂದಿರಾ ಕ್ಯಾಂಟೀನ್‌ಗೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು. ಇಂದಿರಾ ಕ್ಯಾಂಟೀನ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಬಡವರು ಹಾಗೂ ಮಧ್ಯಮ ವರ್ಗದವರಿಗೆ ಇದರಿಂದ ಬಹಳಷ್ಟು ಅನುಕೂಲವಾಗಲಿದೆ. ಕಡಿಮೆ ದರದ ಉಪಹಾರ ಎಂಬ ಉದಾಸೀನ ತೋರಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಪುರಸಭೆ ಅಧಿಕಾರಿಗಳು ಹಾಗೂ ಅಧಿಕಾರಿಗಳು ಆಗಾಗ ಕ್ಯಾಂಟೀನ್‌ಗೆ ಭೇಟಿ ನೀಡಿ ಮೇಲ್ವಿಚಾರಣೆ ಮಾಡಬೇಕು ಎಂದು ಸೂಚಿಸಿದರು.

ಪುರಸಭೆ ಅಧ್ಯಕ್ಷ ಮಹಾಂತೇಶ ಕಲಬಾವಿ, ಸದಸ್ಯರಾದ ಜಿ.ಕೆ.ಹಿರೇಮಠ, ಕಲ್ಲೇಶ ತಾಳದ್, ಅಂಬಣ್ಣ ಭಜಂತ್ರಿ, ಮುಖ್ಯಾಧಿಕಾರಿ ಸುರೇಶ ಶೆಟ್ಟಿ, ಪ್ರಮುಖರಾದ ನಜೀರಸಾಬ ಮೂಲಿಮನಿ, ಮಹೇಶ ಕೋಳೂರು, ಸೈಯದ್ ಮರ್ತುಜಾ ಪೇಂಟರ್, ಅಮೀನುದ್ದೀನ್ ಮುಲ್ಲಾ ಇತರರಿದ್ದರು.

ಶಿಷ್ಟಾಚಾರ ಮರೆಯದಿರಿ

ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ತುಂಗಭದ್ರಾ ಯೋಜನೆಯ ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳರನ್ನು ಆಹ್ವಾನಿಸಬೇಕಿತ್ತು. ಮುಂಚಿತವಾಗಿ ಆಹ್ವಾನಿಸದೆ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ. ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಿ ಎಂದು ಪುರಸಭೆ ಅಧಿಕಾರಿಗಳಿಗೆ ಶಾಸಕ ಪಾಟೀಲ್ ಸೂಚಿಸಿದರು. ಪಟ್ಟಣದ ಬಸ್ ನಿಲ್ದಾಣದಿಂದ ಮಲ್ಲಯ್ಯ ವೃತ್ತದ ವರೆಗೆ ರಸ್ತೆ ವಿಸ್ತರಣೆ ಮಾಡಲಾಗುವುದು. ಯಾವುದೇ ಪ್ರಭಾವಿಗಳು ಒತ್ತಡ ಹೇರಿದರೂ ವಿಸ್ತರಣೆ ಕಾರ್ಯ ಕೈಬಿಡುವುದಿಲ್ಲ. ಪಟ್ಟಣದ ಸುಂದರೀಕರಣಕ್ಕೆ ಆದ್ಯತೆ ನೀಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.