ಕುಷ್ಟಗಿ ತಾಲೂಕಿನ ಎನ್‌ಪಿಎಸ್ ನೌಕರರು ಹಳೇ ಪಿಂಚಣಿ ಯೋಜನೆ ಮರುಜಾರಿಗೆ ಒತ್ತಾಯಿಸಿ ಗುರುವಾರ ಪತ್ರ ಚಳವಳಿ ಆರಂಭಿಸಿದರು. ತಾಪಂ ಇಒ ಪಂಪಾಪತಿ ಹಿರೇಮಠ, ಎನ್‌ಪಿಎಸ್ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರೇಶ ಬೂದಿಹಾಳ, ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ತಾಲೂಕು ಅಧ್ಯಕ್ಷ ಬಾಲಾಜಿ ಬಳಿಗಾರ ಇತರರಿದ್ದರು.  
ಜಿಲ್ಲೆ

ಒಪಿಎಸ್ ಮರುಜಾರಿಗಾಗಿ ಪತ್ರ ಚಳುವಳಿ

ಕುಷ್ಟಗಿ: ಹಳೇ ಪಿಂಚಣಿ ಯೋಜನೆ ಮರು ಜಾರಿಗೆ ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ ಬರೆಯುವ ಮೂಲಕ ತಾಲೂಕಿನ ಎನ್‌ಪಿಎಸ್ ನೌಕರರು ಗುರುವಾರ ಪತ್ರ ಚಳವಳಿ ಆರಂಭಿಸಿದರು. ನೌಕರರ ಸಂಘದ ಪದಾಧಿಕಾರಿಗಳು ವಿವಿಧ ಇಲಾಖೆ ಕಚೇರಿಗಳಿಗೆ ತೆರಳಿ ನೌಕರರರಿಗೆ ಪತ್ರ ಬರೆಯುವಂತೆ ಮನವಿ ಮಾಡಿದರು.

ಎನ್‌ಪಿಎಸ್ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರೇಶ ಬೂದಿಹಾಳ ಮಾತನಾಡಿ, ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ಎನ್‌ಪಿಎಸ್ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆ ಮರು ಜಾರಿಗೊಳಿಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿ ಆರನೇ ಗ್ಯಾರಂಟಿಯಾಗಿ ಘೋಷಿಸಿತ್ತು.

ಅಧಿಕಾರಕ್ಕೆ ಬಂದ ನಂತರ ಈವರೆಗೆ ಚಕಾರ ಎತ್ತದಿರುವುದು ನೌಕರರಲ್ಲಿ ನಿರಾಸೆಯನ್ನುಂಟು ಮಾಡಿದೆ. ಜೀವನದ ಅರ್ಧ ಆಯಸ್ಸನ್ನು ಸಾರ್ವಜನಿಕ ಸೇವೆಯಲ್ಲಿ ಕಳೆಯುವ ನೌಕರರಿಗೆ ನಿವೃತ್ತಿ ನಂತರ ಸಿಗುವ ವೇತನ ಆಸ್ಪತ್ರೆ ಖರ್ಚಿಗೂ ಸಾಲದಾಗುತ್ತಿದೆ. ಹಳೇ ಪಿಂಚಣಿ ಯೋಜನೆ ಮರುಜಾರಿಗೊಳಿಸಿ ನೌಕರರು ತಮ್ಮ ನಿವೃತ್ತಿ ಜೀವನವನ್ನು ನೆಮ್ಮದಿಯಿಂದ ಕಳೆಯುವಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಎನ್‌ಪಿಎಸ್ ನೌಕರರ ಬೇಡಿಕೆ ಈಡೇರಿಸಬೇಕಿದೆ ಎಂದು ಒತ್ತಾಯಿಸಿದರು.

ಫೆ.7ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸಾಂಕೇತಿಕ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು. ಸತ್ಯಾಗ್ರಹದಲ್ಲಿ ಎನ್‌ಪಿಎಸ್ ನೌಕರರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ತಾಲೂಕು ಅಧ್ಯಕ್ಷ ಬಾಲಾಜಿ ಬಳಿಗಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಬೀರಪ್ಪ ಕುರಿ, ನೌಕರರಾದ ಶಿವಪ್ಪ ವಾಗ್ಮೋರೆ, ಭರಮಪ್ಪ ಪರಸಾಪುರ, ಸುಬಾನ ಸಾಬ ನದಾಫ್, ರಾಘವೇಂದ್ರ ಮೆದಿಕೇರಿ ಇತರರಿದ್ದರು.