ಕುಷ್ಟಗಿಯ ಮಾತೋಶ್ರೀ ಹೊಳಿಯಮ್ಮ ಮಹಿಳಾ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶೆ ಸರಸ್ವತಿ ದೇವಿ ಉದ್ಘಾಟಿಸಿದರು.  
ಜಿಲ್ಲೆ

ಮಾನವ ಹಕ್ಕುಗಳ ಉಲ್ಲಂಘನೆ ಆಗದಿರಲಿ: ಕುಷ್ಟಗಿ ಹಿರಿಯ ಸಿವಿಲ್ ನ್ಯಾಯಾಧೀಶೆ ಸರಸ್ವತಿ ದೇವಿ ಸಲಹೆ

ಕುಷ್ಟಗಿ: ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬರಿಗೂ ಗೌರವಯುತವಾಗಿ ಜೀವನ ನಡೆಸುವ ಹಕ್ಕು ಇದೆ ಎಂದು ಪಟ್ಟಣದ ಜೆಎಂಎಫ್ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ಸರಸ್ವತಿ ದೇವಿ ಹೇಳಿದರು.

ಪಟ್ಟಣದ ಮಾತೋಶ್ರೀ ಹೊಳಿಯಮ್ಮ ಮಹಿಳಾ ಕಲಾ ಮಹಾವಿದ್ಯಾಲಯದಲ್ಲಿ ಮಾನವ ಹಕ್ಕುಗಳ ದಿನದ ನಿಮಿತ್ತ ಗುರುವಾರ ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಏರ್ಪಡಿಸಿದ್ದ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾನವ ಹಕ್ಕುಗಳ ಉಲ್ಲಂಘನೆಯ ಸಂದರ್ಭದಲ್ಲಿ ಹಾನಿಗೊಳಗಾದ ವ್ಯಕ್ತಿಗೆ ಕಾನೂನಿನ ಅಡಿ ಪರಿಹಾರ ನೀಡಲಾಗುತ್ತದೆ. ಮಾನವ ಹಕ್ಕುಗಳಿಗೆ ಧಕ್ಕೆಯಾದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಕಾಲೇಜಿನ ಪ್ರಾಚಾರ್ಯ ಡಾ.ಮಹಾಂತೇಶ ದುರುಗಣ್ಣವರ್ ಮಾತನಾಡಿ, ಮಾನವ ಹಕ್ಕುಗಳ ಉಲ್ಲಂಘನೆ ತಡೆಯಲು ಜಾರಿಗೊಳಿಸಲಾದ ಕಾನೂನುಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳಬೇಕು. ಕಾನೂನು ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಎಲ್ಲ ಕಾಲೇಜುಗಳಲ್ಲಿ ನಡೆಯಬೇಕಿದೆ ಎಂದರು. ವಕೀಲೆ ಸುಶೀಲಾ ಎಲ್.ಮಂಗಳೂರು ಉಪನ್ಯಾಸ ನೀಡಿದರು. ಸ್ಥಳೀಯ ವಕೀಲರ ಸಂಘದ ಅಧ್ಯಕ್ಷ ಎಂ.ಎಚ್.ಗೋಡಿ, ಸಹಾಯಕ ಸರ್ಕಾರಿ ಅಭಿಯೋಜಕ ಎಲ್.ರಾಯನಗೌಡ, ಸಂಸ್ಥೆಯ ಖಜಾಂಚಿ ಸುಂದರಕುಮಾರ್ ಚೌಡ್ಕಿ, ಶಿಕ್ಷಕ ಬಸವರಾಜ ಪೂಜಾರ ಇತರರಿದ್ದರು.