ಕುಷ್ಟಗಿ: ಬಜೆಟ್ ಅಧಿವೇಶನದಲ್ಲಿ ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳ ಪರ ಧ್ವನಿ ಎತ್ತಿದರೆ ಮಾತ್ರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ಪರ ಮತ ಚಲಾಯಿಸುತ್ತೇವೆ. ಇಲ್ಲವಾದಲ್ಲಿ ವಿರುದ್ಧ ಚಲಾಯಿಸಬೇಕಾಗುತ್ತದೆ ಎಂದು ಎ. ಜೆ. ಸದಾಶಿವ ವರದಿ ಜಾರಿ ಹೋರಾಟ ಸಮಿತಿಯ ಪದಾಧಿಕಾರಿಗಳು ಶಾಸಕ ಅಮರೇಗೌಡ ಪಾಟೀಲ್ ಬಯಾಪುರಗೆ ಮಂಗಳವಾರ ಮನವಿ ಸಲ್ಲಿಸಿ ಎಚ್ಚರಿಸಿದರು.
ಎ. ಜೆ. ಸದಾಶಿವ ವರದಿ ಜಾರಿಯಾಗಬೇಕೆಂಬುದು ಮಾದಿಗ ಸಮುದಾಯದ ಬಹುದಿನದ ಬೇಡಿಕೆಯಾಗಿದೆ. ವರದಿ ಜಾರಿಗೊಳಿಸುವ ಸಂಬಂಧ ಅಧಿವೇಶನದಲ್ಲಿ ಧ್ವನಿ ಎತ್ತಬೇಕು. ಹೀಗೆ ಮಾಡಿದಲ್ಲಿ ಮಾದಿಗ ಮತ್ತು ಸಂಬಂಧಿತ ಜಾತಿಗಳು ಆಜೀವ ಪರ್ಯಂತ ಋಣಿಯಾಗಿರುವುದಲ್ಲದೆ ತಾಲೂಕಿನಲ್ಲಿರುವ ಸಮುದಾಯದ 35ಸಾವಿರ ಜನರೂ ಮತ ಚಲಾಯಿಸಿ ಮತ್ತೊಮ್ಮೆ ಶಾಸಕರಾಗಲು ಬೆಂಬಲಿಸುವುದಾಗಿ ತಿಳಿಸಿದರು.
ಮಾದಿಗ ಮಹಾಸಭಾದ ತಾಲೂಕು ಅಧ್ಯಕ್ಷ ನಾಗರಾಜ ಮೇಲಿನಮನಿ, ಉಪಾಧ್ಯಕ್ಷ ಟಿ. ಕೃಷ್ಣಮೂರ್ತಿ, ಕಾರ್ಯದರ್ಶಿ ಶರಣಪ್ಪ ಬೊದೂರು, ಖಜಾಂಚಿ ಹನುಮಂತ ಇಂಡಿ, ಬಸವರಾಜ ಬೇವಿನಕಟ್ಟಿ, ಚಂದ್ರಶೇಖರ ಹಿರೇಮನಿ ಇತರರು ಇದ್ದರು.