ಕುಷ್ಟಗಿ: ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕಿನ ಹಿರೇಮನ್ನಾಪುರದಲ್ಲಿ ಕರವೇ ಗ್ರಾಮ ಘಟಕದ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಹಾಗೂ ದ್ರವ ತ್ಯಾಜ್ಯ ಅಲ್ಲಲ್ಲಿ ಮಡುಗಟ್ಟಿ ನಿಂತು ಮಲಿನತೆ ಹೆಚ್ಚುತ್ತಿದೆ. ಕೂಡಲೇ ಚರಂಡಿ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದು ಹದಗೆಟ್ಟಿದೆ. ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಗ್ರಂಥಾಲಯಕ್ಕೆ ಸುಸಜ್ಜಿತ ಕಟ್ಟಡ ನಿರ್ಮಿಸುವುದು, ಸರ್ಕಾರಿಶಾಲೆಗೆ ಆಟದ ಮೈದಾನ, ಕುಡಿವ ನೀರಿನ
ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಕರವೇ ತಾಲೂಕು ಅಧ್ಯಕ್ಷ ಪ್ರಕಾಶ ಮನ್ನೇರಾಳ, ಗೌರವ ಅಧ್ಯಕ್ಷ ಆದಪ್ಪ ಉಳ್ಳಾಗಡ್ಡಿ, ಉಪಾಧ್ಯಕ್ಷ ಚನ್ನಪ್ಪ ನಾಲಾಗಾರ, ಗ್ರಾಮ ಘಟಕದ ಅಧ್ಯಕ್ಷ ಪರಸಪ್ಪ ಅಳ್ಳಳ್ಳಿ, ಉಪಾಧ್ಯಕ್ಷ ಮರಿಯಪ್ಪ ಮುಳ್ಳೂರು ಇತರರು ಇದ್ದರು.