ಹನುಮಸಾಗರದ ಕೋವಿಡ್ ಕೇರ್ ಸೆಂಟರ್‌ಗೆ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಸೋಮವಾರ ಭೇಟಿ ನೀಡಿದ್ದರು. 
ಜಿಲ್ಲೆ

ಸೋಂಕಿತರ ಊಟಕ್ಕೆ ಇತಿಮಿತಿ ಬೇಡ; ಶಾಸಕ ಅಮರೇಗೌಡ ಬಯ್ಯಪುರ ಸೂಚನೆ

ಕುಷ್ಟಗಿ/ಹನುಮಸಾಗರ: ಕರೊನಾ ಸೋಂಕು ದೃಢವಾದವರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲಾಗುವುದು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರಿಗೆ ಯಾವುದೇ ನಿರ್ಬಂಧ ಇಲ್ಲದಂತಾಗಿದೆ. ಆರೈಕೆ ಕೇಂದ್ರಗಳಿಗೆ ಬರಲು ಕೂಡ ತಕರಾರು ಮಾಡುತ್ತಿದ್ದಾರೆ. ಹೀಗಾಗಿ ಇನ್ನು ಮುಂದೆ ಹೋಂ ಐಸೋಲೇಷನ್‌ಗೆ ಅವಕಾಶವೇ ಇಲ್ಲ. ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಸೋಂಕಿತರಿಗೆ ಕೇವಲ ಮೂರು ಇಡ್ಲಿ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಊಟದ ವಿಚಾರದಲ್ಲಿ ಮಿತಿ ಬೇಡ. ವಸತಿ ನಿಯದ ಅಡುಗೆಯವರನ್ನೇ ಕರೆಯಿಸಿ ಅಡುಗೆ ಮಾಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ತಹಸೀಲ್ದಾರ್ ಎಂ.ಸಿದ್ದೇಶ, ತಾಪಂ ಇಒ ಕೆ.ತಿಮ್ಮಪ್ಪ, ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ ಮತ್ತು ಇತರರು ಇದ್ದರು.

ಹನುಮಸಾಗರದ ಕೋವಿಡ್ ಕೇರ್ ಸೆಂಟರ್‌ಗೆ ಶಾಸಕ ಬಯ್ಯಪುರ ಸೋಮವಾರ ಭೇಟಿ ನೀಡಿದ್ದರು. ಬಳಿಕ ಮಾತನಾಡಿ, ಕೋವಿಡ್ ಕೇರ್ ಸೆಂಟರ್‌ನಲ್ಲಿ ಸೋಂಕಿತರಿಗೆ ಅಗತ್ಯ ಸೌಲಭ್ಯ ಒದಗಿಸಲಾಗುತ್ತಿದೆ. ಸ್ವಚ್ಛತೆ ಕಾಪಾಡುವಂತೆ ಗ್ರಾಪಂ ಸಿಬ್ಬಂದಿಗೆ ಸೂಚಿಸಲಾಗಿದೆ. ಸೋಂಕಿತರು ಆರೈಕೆ ಕೇಂದ್ರದಲ್ಲಿದ್ದರೆ ಬೇಗ ಆರೋಗ್ಯ ಸುಧಾರಿಸಲಿದೆ ಹಾಗೂ ಬೇರೆಯವರಿಗೂ ಸೋಂಕು ತಗುಲುವುದನ್ನು ತಡೆಯಬಹುದು ಎಂದರು. ಪಿಡಿಒ ನಿಂಗಪ್ಪ ಮೂಲಿಮನಿ, ಲೆಕ್ಕ ಸಹಾಯಕ ವೀರನಗೌಡ ಪಾಟೀಲ್, ನೌಕರ ಮಹಾಂತಯ್ಯ ಕೋಮಾರಿ ಹಾಗೂ ಇತರರಿದ್ದರು.