ಕುಷ್ಟಗಿ ಹೊರವಲಯದ ದೋಟಿಹಾಳ ರಸ್ತೆ ಪಕ್ಕದ ಜಮೀನಿನಲ್ಲಿ ಗ್ರಾನೈಟ್ ತ್ಯಾಜ್ಯದಲ್ಲಿ ಸಿಲುಕಿ ಸತ್ತ ಕುರಿಯೊಂದನ್ನು ಹೊರತಗೆಯಲು ಪರದಾಡುತ್ತಿದ್ದ ದೃಶ್ಯ ಭಾನುವಾರ ಕಂಡುಬಂತು.  
ಜಿಲ್ಲೆ

ಪ್ರಾಣಿ ಸಂಕುಲಕ್ಕೆ ಕಂಟಕವಾದ ಗ್ರಾನೈಟ್ ತ್ಯಾಜ್ಯ!

ಕುಷ್ಟಗಿ: ಪಟ್ಟಣ ಹೊರವಲಯದ ದೋಟಿಹಾಳ ರಸ್ತೆ ಪಕ್ಕದ ಜಮೀನಿನಲ್ಲಿ ಗ್ರಾನೈಟ್ ಫ್ಯಾಕ್ಟರಿಯ ತ್ಯಾಜ್ಯ ಸುರಿಯಲಾಗುತ್ತಿದೆ. ಕುರಿ ಇನ್ನಿತರ ಜಾನುವಾರುಗಳು ತ್ಯಾಜ್ಯದಲ್ಲಿ ಸಿಕ್ಕಿ ಹಾಕಿಕೊಂಡು ನರಳಾಡುತ್ತಿದ್ದು, ಭಾನುವಾರ ತ್ಯಾಜ್ಯದಲ್ಲಿ ಸಿಲುಕೊಂಡ ಕುರಿಯೊಂದು ಹೊರಬಾರದೆ ಸತ್ತಿದೆ.

ಪಟ್ಟಣದಲ್ಲಿರುವ ವಿವಿಧ ಗ್ರಾನೈಟ್ ಫ್ಯಾಕ್ಟರಿ ಮಾಲೀಕರು ಫ್ಯಾಕ್ಟರಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ(ಕಲ್ಲಿನ ಪುಡಿ)ಯನ್ನೆಲ್ಲ ದೋಟಿಹಾಳ ರಸ್ತೆ ಪಕ್ಕ ತಂದು ಸುರಿಯುತ್ತಿದ್ದಾರೆ. ತ್ಯಾಜ್ಯದಿಂದ ತುಂಬಿದ ಸುಮಾರು 6ಎಕರೆ ಪ್ರದೇಶ ಕೆರೆಯಂತೆ ಕಂಡುಬರುತ್ತಿದೆ. ಸದ್ಯ ಮಳೆ ನೀರು ಸಂಗ್ರಹಗೊಂಡು ತ್ಯಾಜ್ಯವೆಲ್ಲ ಸಿಮೆಂಟ್ ಕಾಂಕ್ರಿಟ್‌ನಂತಾಗಿದೆ. ಸುತ್ತಲೂ ರಕ್ಷಣಾ ಗೋಡೆಯಾಗಲಿ, ತಂತಿ ಬೇಲಿಯಾಗಲಿ ಅಳವಡಿಸಿಲ್ಲ. ಆಹಾರ ಅರಸಿ ಹೋಗುವ ಕುರಿ ಇನ್ನಿತರ ಜಾನುವಾರುಗಳು ತ್ಯಾಜ್ಯದಲ್ಲಿ ಸಿಲುಕಿಕೊಳ್ಳುತ್ತಿವೆ. ಹೀಗೆ ಸಿಲುಕಿಕೊಂಡ ಜಾನುವಾರುಗಳನ್ನು ಹೊರ ತಗೆಯಲು ರೈತರು ಪರದಾಡುತ್ತಿದ್ದಾರೆ. ಜಮೀನುಗಳಿಗೆ ತೆರಳುವ ರೈತರೂ ಸಹ ತ್ಯಾಜ್ಯದಲ್ಲಿ ಸಿಲುಕಿಕೊಳ್ಳುತ್ತಿದ್ದು, ಇತ್ತೀಚೆಗೆ ಜಮೀನಿಗೆ ತೆರಳುತ್ತಿದ್ದ ಬಾಲಕನೊಬ್ಬ ಸಿಲುಕಿಕೊಂಡಿದ್ದರಿಂದ ಜೆಸಿಬಿ ಸಹಾಯದಿಂದ ಮೇಲಕ್ಕೆತ್ತಲಾಯಿತು. ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾದ ಎಂದು ರೈತರು ಹೇಳುತ್ತಿದ್ದಾರೆ.

ಕುಷ್ಟಗಿಯ ಎಲ್ಲ ಗ್ರಾನೈಟ್ ಫ್ಯಾಕ್ಟರಿ ಮಾಲಿಕರು ತ್ಯಾಜ್ಯವನ್ನೆಲ್ಲ ರಸ್ತೆ ಪಕ್ಕದ ಜಮೀನಿನಲ್ಲಿ ತಂದು ಸುರಿಯುತ್ತಿರುವುದರಿಂದ ಸುತ್ತಲಿನ ರೈತರಿಗೆ ತೊಂದರೆಯಾಗುತ್ತಿದೆ. ಸುತ್ತಲೂ ರಕ್ಷಣಾ ಗೋಡೆಯಾಗಲಿ, ತಂತಿ ಬೇಲಿಯನ್ನಾಗಲಿ ಅಳವಡಿಸಿಲ್ಲ. ತ್ಯಾಜ್ಯದಲ್ಲಿ ಸಿಲುಕಿಕೊಂಡ ಬಾಲಕನೊಬ್ಬ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸದ್ಯ ಕುರಿಯೊಂದು ಸತ್ತಿದೆ. ಹೀಗೆ ಮುಂದುವರಿದರೆ ನಿತ್ಯ ಒಂದಿಲ್ಲೊಂದು ಅವಘಡಗಳು ಸಂಭವಿಸುತ್ತವೆ. ಕೂಡಲೇ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು.ನಜೀರಸಾಬ ಮೂಲಿಮನಿ, ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ, ಕುಷ್ಟಗಿ ಕುಷ್ಟಗಿ ಹೊರವಲಯದ ಜಮೀನಿನಲ್ಲಿ ಗ್ರಾನೈಟ್ ತ್ಯಾಜ್ಯ ತಂದು ಸುರಿಯುತ್ತಿರುವುದು ಗಮನಕ್ಕಿಲ್ಲ. ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ವಸ್ತುಸ್ಥಿತಿ ತಿಳಿದು ಅಗತ್ಯ ಕ್ರಮ ಕೈಗೊಳ್ಳಲಾಗುವುದು.ನಳಿನ್ ಅತುಲ್, ಡಿಸಿ, ಕೊಪ್ಪಳ