ಕುಷ್ಟಗಿ: ಶಾಲಾ ಹಂತದಿಂದಲೇ ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳಸಿಕೊಳ್ಳಬೇಕಿದೆ ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿದರು.
ಪಟ್ಟಣದ ಎಸ್‌ವಿಸಿ ಸಂಸ್ಥೆಯ ವಿವಿಧ ತರಗತಿಗಳಲ್ಲಿ ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.
ಎಲ್ಲ ಕ್ಷೇತ್ರಗಳಲ್ಲಿ ನಾಯಕತ್ವ ಕೊರತೆ ಇದೆ. ಪ್ರಜಾಸತ್ತಾತ್ಮಕ ಮಾದರಿಯಲ್ಲಿ ಚುನಾವಣೆ ನಡೆದು ವಿವಿಧ ಹುದ್ದೆಗೆ ಚುನಾಯಿತರಾಗುವ ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಭವಿಷ್ಯದಲ್ಲಿ ಉತ್ತಮ ನಾಯಕರಾಗಲು ಸಾಧ್ಯ. ಆ ಮೂಲಕ ಆಡಳಿತ ವ್ಯವಸ್ಥೆ ಸದೃಢಗೊಳಿಸಬಹುದು. ಮಕ್ಕಳು ಮೊಬೈಲ್ ಗೀಳಿನಿಂದ ಮುಕ್ತರಾದಾಗ ಯಶಸ್ಸು ಸಾಧ್ಯ. ಕೇವಲ ಪದವಿಗಳಿಂದ ದೇಶ ಕಟ್ಟಲು ಸಾಧ್ಯವಿಲ್ಲ. ಬದುಕಿನಲ್ಲಿ ನೈತಿಕತೆ ಮೈಗೂಡಿಸಿಕೊಳ್ಳಬೇಕು. ನಮ್ಮ ಭಾಗದ ಮಕ್ಕಳು ಮುಂದೆ ಒಂದು ದಿನ ವಿಧಾನಸೌಧದಲ್ಲಿ ಆಡಳಿತ ನಡೆಸುವಂತಾಗಲು ಶಾಲಾ ಸಂಸತ್ ಕಾರ್ಯಕ್ರಮ ಪೂರಕವಾಗಲಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಸಿ.ವಿ.ಚಂದ್ರಶೇಖರ, ಬಿಇಒ ಸುರೇಂದ್ರ ಕಾಂಬಳೆ, ಸಿಇಒ ಜಗದೀಶ ಅಂಗಡಿ, ಮುಖ್ಯಶಿಕ್ಷಕ ಭೀಮರಾವ್ ಕುಲಕರ್ಣಿ, ಕಾಲೇಜಿನ ಪ್ರಾಚಾರ್ಯ ಡಾ.ತಿಪ್ಪಾಶೆಟ್ಟಿ, ಹಣಕಾಸು ಅಧಿಕಾರಿ ಅರುಣ ಕರ್ಮಕರ್ ಇತರರಿದ್ದರು.