ಜಿಲ್ಲೆ

ಗ್ರಾಹಕರು ಡಿಜಿಟಲ್ ಬ್ಯಾಂಕಿಂಗ್‌ಗೆ ಹೆಚ್ಚಿನ ಆದ್ಯತೆ ನೀಡಲಿ ಎಂದು ಸಲಹೆ ನೀಡಿದ ಕುಷ್ಟಗಿ ತಹಸೀಲ್ದಾರ್ ಎಂ.ಸಿದ್ದೇಶ

ಕುಷ್ಟಗಿ: ಜನರು ಡಿಜಿಟಲ್ ಬ್ಯಾಂಕಿನ ವ್ಯವಹಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಡಿಜಿಟಲ್ ಅತ್ಯಂತ ಸುರಕ್ಷಿತವಾಗಿದೆ ಈ ನಿಟ್ಟಿನಲ್ಲಿ ಹೊಸದಾಗಿ ಕುಷ್ಟಗಿಯಲ್ಲಿ ಕರ್ಣಾಟಕ ಬ್ಯಾಂಕ್ ಶಾಖೆ ಪ್ರಾರಂಭವಾಗಿದೆ. ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕೆಂದು ತಹಸೀಲ್ದಾರ್ ಎಂ.ಸಿದ್ದೇಶ ಹೇಳಿದರು.

ಪಟ್ಟಣದ ಇಂದಿರಾ ಕಾಲನಿಯಲ್ಲಿ ಕರ್ಣಾಟಕ ಬ್ಯಾಂಕ್ ಶಾಖೆ ಮತ್ತು ಮಿನಿ-ಲಾಬಿ ಉದ್ಘಾಟಿಸಿ ಬುಧವಾರ ಮಾತನಾಡಿದರು. ಕರ್ಣಾಟಕ ಬ್ಯಾಂಕ್ ವಿಶ್ವಾಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ. ಗ್ರಾಹಕರ ಹಿತವನ್ನು ಕಾಪಾಡಬೇಕೆಂಬ ಉದ್ದೇಶದಿಂದ ಬ್ಯಾಂಕಿನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಈ ಬ್ಯಾಂಕ್ ಉನ್ನತ ಮಟ್ಟಕ್ಕೇರಲು ಗ್ರಾಹಕರ ಸಹಕಾರ ಬ್ಯಾಂಕಿನ ಜತೆಗೆ ನಿಕಟ ಸಂಪರ್ಕ ಇಟ್ಟುಕೊಂಡು ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂದರು.

ಭವಿಷ್ಯದ ಡಿಜಿಟಲ್ ಬ್ಯಾಂಕ್ ಆಗಿ ಹೊರಹೊಮ್ಮುವತ್ತ ಹೆಜ್ಜೆ ಇಡುತ್ತಿರುವ ಕರ್ಣಾಟಕ ಬ್ಯಾಂಕ್, ಡಿಜಿಟಲ್ ವ್ಯವಸ್ಥೆಯ ಮೂಲಕ ಸಾಲ ವಿತರಣಾ ಕಾರ್ಯದಲ್ಲಿ ತೊಡಗಿದೆ. ಇದರಿಂದ ಗ್ರಾಹಕರಿಗೆ ಕ್ಷಿಪ್ರವಾಗಿ, ಸುಲಭವಾಗಿ ಸಾಲ ಸಿಗುವ ಮೂಲಕ ಅವರಿಗೆ ಉತ್ತಮ ಅನುಭೂತಿಯನ್ನು ನೀಡಲಿದೆ ಎಂದರು.

ಕಲಬುರಗಿ ಕರ್ಣಾಟಕ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಶ್ರೀನಿವಾಸ್ ಎಸ್.ದಂಡಾಪುರ ಮಾತನಾಡಿ, ಕರ್ಣಾಟಕ ಬ್ಯಾಂಕ್ ಆಧುನಿಕ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಬಳಸಿ ಕೊಡಬಹುದಾದ ಎಲ್ಲ ಉನ್ನತ ಸೇವೆಗಳನ್ನು ಗ್ರಾಹಕರಿಗೆ ಒದಗಿಸಿದ ತೃಪ್ತಿಯಲ್ಲಿದ್ದು, ಮುಂದಕ್ಕೂ ಇನ್ನಷ್ಟು ಉತ್ತಮ ಸೇವೆ ನೀಡಲಿದೆ. ಸದ್ಯದಲ್ಲೇ ಕಾರ್ಡ್‌ಲೆಸ್ ಸೇವೆ ನೀಡಲಿದ್ದೇವೆ ಎಂದರು.

ಕೊಪ್ಪಳ ಜಿಲ್ಲೆಯಲ್ಲಿ ಕರ್ಣಾಟಕ ಬ್ಯಾಂಕ್ ನಾಲ್ಕು ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಅದರಲ್ಲಿ ವಿಶೇಷವಾಗಿ ಕಲಬುರಗಿ ವಿಭಾಗದ ಜಿಲ್ಲೆಗಳಲ್ಲಿ 63 ಶಾಖೆಗಳು ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಜತೆಗೆ ಉದ್ದಿಮೆದಾರರಿಗೆ ಸಾಲ, ಗೃಹಸಾಲ, ವಾಹನ ಸಾಲ, ಕ್ಷಣಮಾತ್ರದಲ್ಲಿ ಉಳಿತಾಯ ಖಾತೆ ತೆರೆಯಲಾಗುವುದು ಎಂದರು.

ಕುಷ್ಟಗಿ ಬ್ಯಾಂಕ್ ಮ್ಯಾನೇಜರ್ ಕೆ.ಎಲ್.ರಾಘವೇಂದ್ರ, ಮಂಜುನಾಥ ಕುಲಕರ್ಣಿ, ಅನುಪಮ ಇಂಡಿ, ಸುಭಾಷ್, ಚಂದ್ರಶೇಖರ್ ದೇಶಪಾಂಡೆ, ಕೃಷ್ಣ ಕಿಶೋರ, ಮನೋಜ್ ಶ್ರೀನಿವಾಸ್ ಸೇರಿದಂತೆ ಇತರರಿದ್ದರು.