ಕುಷ್ಟಗಿ: ಪ್ರತಿಯೊಬ್ಬರಿಗೆ ಎರಡು ಡೋಸ್ ಲಸಿಕೆ ಹಾಕಿಸಲು ಕಾಳಜಿ ತೋರಬೇಕೆಂದು ಅಧಿಕಾರಿಗಳಿಗೆ ಶಾಸಕ ಅಮರೇಗೌಡ ಬಯ್ಯಪುರ ಸೂಚಿಸಿದರು.
ಪಟ್ಟಣದ ಸರ್ಕಿಟ್ ಹೌಸ್‌ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ತಾಪಂ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದರು. ಎರಡು ಡೋಸ್ ಲಸಿಕೆ ಪಡೆದವರು ಶೇ.90 ಸುರಕ್ಷಿತರು ಎಂಬುದು ಗೊತ್ತಿದ್ದರೂ ಗ್ರಾಮೀಣ ಪ್ರದೇಶದ ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುವವರ ಮನೆಗೆ ಪೊಲೀಸರನ್ನು ಕಳುಹಿಸಲಾಗುವುದು ಎಂದು ಎಚ್ಚರಿಸಿದರು.
ಗ್ರಾಪಂಗಳಿಗೆ ಪಿಡಿಒಗಳೇ ಮುಖ್ಯಸ್ಥರು. ವ್ಯಾಕ್ಸಿನ್ ಹಾಕಿಸುವ ವಿಚಾರದಲ್ಲಿ ಪಿಡಿಒಗಳು ಜವಾಬ್ದಾರಿ ನಿಭಾಯಿಸಬೇಕಿದೆ. ಆದರೆ, ಬಹುತೇಕ ಪಿಡಿಒಗಳು ಕಚೇರಿಗೆ ಹೋಗುವುದಿಲ್ಲ. ಹೋದರೂ ಬೇಕಾದವರನ್ನು ಕಚೇರಿಯಲ್ಲಿ ಕೂರಿಸಿಕೊಂಡು ರಾಜಕೀಯ ಮಾಡುತ್ತಾರೆ ಎಂಬ ದೂರು ಎಲ್ಲ ಕಡೆಯಿಂದ ಕೇಳಿಬರುತ್ತಿದೆ. ಸೇವಾ ಮನೋಭಾವನೆಯಿಂದ ಕೆಲಸ ಮಾಡುವಂತೆ ಶಾಸಕ ಬಯ್ಯಪುರ ಸೂಚಿಸಿದರು.