ಕುಷ್ಟಗಿ ಹೊರವಲಯದ ಚತುಷ್ಪತ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಸಂಭವಿಸಿದ ರಸ್ತೆ ಅಪಘಾತದ ದೃಶ್ಯ.  
ಜಿಲ್ಲೆ

ಕಂಟೇನರ್‌ಗೆ ಹಿಂದಿಯಿಂದ ಕಾರು ಡಿಕ್ಕಿ, ಮೂವರು ಮೃತ

ಕುರುವತ್ತಿ ಶ್ರೀಕಾಂತಪ್ಪ

ಕುಷ್ಟಗಿ: ಮುಂದೆ ಚಲಿಸುತ್ತಿದ್ದ ಕಂಟೇನರ್‌ಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಚಾಲಕ ಸೇರಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿರುವ ಘಟನೆ ಪಟ್ಟಣ ಹೊರವಲಯದ ಚತುಷ್ಪತ ರಾಷ್ಟ್ರೀಯ ಹೆದ್ದಾರಿಯ ಅಮರಗುಂಡಪ್ಪ ಪೆಟ್ರೋಲ್ ಬಂಕ್ ಬಳಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ.

ಕಾರಿನಲ್ಲಿದ್ದ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ ಗೌರಮ್ಮ ಹನುಮಗೌಡ ಕನ್ನೂರು (60) ಹಾಗೂ ಗೌರಮ್ಮಳ ಸಹೋದರ ಅದೇ ತಾಲೂಕಿನ ನೇಬಗೇರಿಯ ಸುರೇಶ ಈರಸಂಗಪ್ಪ ಹಂಡರಗಲ್(43) ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಗಂಭೀರ ಗಾಯಗೊಂಡ ಚಾಲಕ ಕೋಳೂರು ತಾಂಡಾದ ಪ್ರವೀಣಕುಮಾರ ಬೋಜಪ್ಪ ಚವ್ಹಾಣ್ (27)ಚಿಕಿತ್ಸೆಗೆಂದು ಬಾಗಲಕೋಟೆಗೆ ಕರೆದೊಯ್ಯುವಾಗ ಅಸುನೀಗಿದ್ದಾರೆ. ದಾವಣಗೆಯಲ್ಲಿ ಮದುವೆ ಕಾರ್ಯ ಮುಗಿಸಿಕೊಂಡು ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ.

ಕಾರಿನ ಮುಂಭಾಗ ಕಂಟೇನರ್ ಒಳಗೆ ಸಿಲುಕಿಕೊಂಡು ಸಂಪೂರ್ಣ ನಜ್ಜುಗುಜ್ಜಾಗಿದೆ. ಮೃತ ಗೌರಮ್ಮಳ ಪತಿ ಹನುಮಗೌಡ ನೀಡಿದ ದೂರಿನನ್ವಯ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡು ವಾರಗಳ ಹಿಂದೆ (ಮೇ 28) ಇದೇ ರಸ್ತೆಯಲ್ಲಿ ಇಂತಹದ್ದೇ ಅವಘಡ ಸಂಭವಿಸಿ ಒಂದೇ ಕುಟುಂಬದ 6 ಜನ ಸ್ಥಳದಲ್ಲೇ ಮೃತಪಟ್ಟಿದ್ದರು.