ಕೃಷಿ ಅಭಿಯಾನಕ್ಕೆ ಚಾಲನೆ
ಕುಷ್ಟಗಿ: ರೈತರು ಕೃಷಿ ಅಧಿಕಾರಿಗಳು ಹಾಗೂ ವಿಜ್ಞಾನಿಗಳ ಸಲಹೆ, ಮಾರ್ಗದರ್ಶನ ಪಡೆದು ಉತ್ತಮ ಆದಾಯ ಪಡೆಯಬೇಕೆಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ತಿಳಿಸಿದರು.
ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಸೋಮವಾರ ಸಮಗ್ರ ಕೃಷಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಎಲ್ಲ ರೈತರು ಮಣ್ಣಿನ ಪರೀಕ್ಷೆ ಮಾಡಿಸಿ ಸೂಕ್ತವಾದ ಬೆಳೆಗಳನ್ನು ಬೆಳೆಯಬೇಕು. ಒಣ ಬೇಸಾಯ ಆಧಾರಿತ ಈ ಭಾಗಕ್ಕೆ ಕೃಷಿ ಹೊಂಡಗಳು ಆಧಾರವಾಗಿದ್ದು, ಸರ್ಕಾರದ ಅನುದಾನದಡಿ ವೈಜ್ಞಾನಿಕವಾಗಿ ನಿರ್ಮಿಸಿಕೊಂಡರೆ ಹೆಚ್ಚು ಅನುಕೂಲ ಎಂದರು.
ಬಿತ್ತನೆ ಬೀಜ, ಗೊಬ್ಬರ ಖರೀದಿಸಿದ ನಂತರ ಸಂಬಂಧಿಸಿದ ಖಾಲಿ ಪ್ಯಾಕೇಟ್ ಹಾಗೂ ರಸೀದಿಯನ್ನು ಜೋಪಾನವಾಗಿಟ್ಟುಕೊಳ್ಳಬೇಕು. ಒಂದು ವೇಳೆ ಬೀಜ ಕಳಪೆಯಾಗಿದ್ದರೆ ಕಾನೂನು ಮೊರೆ ಹೋಗಲು ಅನುಕೂಲವಾಗುತ್ತದೆ ಎಂದು ಶಾಸಕ ಬಯ್ಯಾಪುರ ಸಲಹೆ ನೀಡಿದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ನಜೀರ್‌ಸಾಬ್ ಮೂಲಿಮನಿ, ಭಾರತೀಯ ಕೃಷಿ ಕಾರ್ಮಿಕ ರೈತ ಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜ ಸ್ವಾಮಿ ಹಿರೇಮಠ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ, ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ, ತಾಂತ್ರಿಕ ಅಧಿಕಾರಿ ನಾಗನಗೌಡ ಪಾಟೀಲ್ ಮತ್ತು ಇತರರಿದ್ದರು.